‘ರನ್‌ವೇ ನಿರ್ಮಾಣದ ಲೋಪವೇ ಕಾರಣ’
ಮಂಗಳೂರಿನಲ್ಲಿ ನಡೆದ ವಿಮಾನ ದುರಂತಕ್ಕೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಎರಡನೇ ರನ್‌ವೇ ನಿರ್ಮಾಣದಲ್ಲಿನ ಲೋಪವೇ ಕಾರಣ ಎಂದು ‘ಎನ್‌ವಿರಾನ್‌ಮೆಂಟಲ್ ಸಪೋರ್ಟ್ ಗ್ರೂಪ್’ (ಇಎಸ್‌ಜಿ) ಆರೋಪಿಸಿದೆ.
ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ರನ್‌ವೇ ನಿರ್ಮಾಣಕ್ಕೆ ಅವಕಾಶವೇ ಇರಲಿಲ್ಲ. ಯಾವುದೇ ರೀತಿಯ ಅಧ್ಯಯನ ನಡೆಸದೇ, ಮುನ್ನೆಚ್ಚರಿಕೆ ವಹಿಸದೇ ರನ್‌ವೇ ನಿರ್ಮಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಹಠಕ್ಕೆ ಬಿದ್ದು ಕಾಮಗಾರಿ ನಡೆಸಿದ್ದೇ ಈಗ ನಡೆದಿರುವ ದುರ್ಘಟನೆಗೆ ಕಾರಣ ಎಂದು ಇಎಸ್‌ಜಿ ಸಂಯೋಜಕ ಲಿಯೋ ಸಲ್ಡಾನ ಮತ್ತು ವಕ್ತಾರ ಅರ್ತೂರು ಪಿರೇರಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
‘ಇದು ದುರಂತವಲ್ಲ, ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಕರ್ತವ್ಯಲೋಪದ ಫಲ. ರನ್‌ವೇ ನಿರ್ಮಾಣದಲ್ಲಿ ಅಧಿಕಾರಿಗಳು ಎಸಗಿದ ಲೋಪದ ಫಲವಾಗಿ ನೂರಾರು ಅಮಾಯಕರು ಜೀವ ತೆತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಓ) ನಿಯಮಗಳ ಪ್ರಕಾರ ರನ್‌ವೇ ವಿಸ್ತರಣೆಗೆ ಅಲ್ಲಿ ಅಗತ್ಯ ಭೂಮಿಯೇ ಇರಲಿಲ್ಲ. ಇದು ಅಪಾಯಕ್ಕೆ ದಾರಿಯಾಗಲಿದೆ ಎಂದು ತಮ್ಮ ಸಂಸ್ಥೆ ಹೈಕೋರ್ಟ್‌ನಲ್ಲಿ ಎರಡು ಬಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಅರ್ಜಿಗಳನ್ನು ತಿರಸ್ಕರಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯೂ ತಿರಸ್ಕೃತವಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಸೂಚನೆಯನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಪಾಲಿಸಿಲ್ಲ ಎಂದು ಹೇಳಿದ್ದಾರೆ.
‘ಮಡಿದವರ ಕುಟುಂಬಗಳಿಗೆ ಸಾಂತ್ವನ ಹೇಳುವ ಸಲುವಾಗಿ ನಾವು ಈಗ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡುತ್ತೇವೆ. ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲು ಚಿಂತನೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ವಿಮಾನ ಸಂಚಾರ ವ್ಯತ್ಯಯ
ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಶನಿವಾರ ಬೆಳಿಗ್ಗೆ ಕೆಲ ವಿಮಾನಗಳ ಹಾರಾಟದಲ್ಲಿ ಸ್ವಲ್ಪ ವ್ಯತ್ಯಯವಾಯಿತು.
ಬೆಂಗಳೂರು: ಮಂಗಳೂರಿಗೆ ಹೋಗಬೇಕಿದ್ದ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು ಹಾಗೂ ಕೆಲ ವಿಮಾನಗಳು ತಡವಾಗಿ ನಿರ್ಗಮಿಸಿದವು.
ಬೆಂಗಳೂರು- ಮಂಗಳೂರು ನಡುವೆ ಪ್ರತಿನಿತ್ಯ ಸಂಚರಿಸುತ್ತಿದ್ದ ಜೆಟ್ ಏರ್‌ವೇಸ್‌ನ ಎರಡು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಬೆಳಿಗ್ಗೆ 10.40ಕ್ಕೆ ಮಂಗಳೂರಿಗೆ ಹೋಗಬೇಕಿದ್ದ ಕಿಂಗ್‌ಫಿಷರ್ ಏರ್‌ವೇಸ್‌ನ ವಿಮಾನ ಸುಮಾರು ಎರಡು ತಾಸು ತಡವಾಗಿ ಬಿಐಎಎಲ್‌ನಿಂದ ನಿರ್ಗಮಿಸಿತು.
‘ವಿಮಾನ ದುರಂತ ಸಂಭವಿಸಿರುವುದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಗೊತ್ತಾಯಿತು. ಆದ್ದರಿಂದ ಕಿಂಗ್‌ಫಿಷರ್ ಏರ್‌ವೇಸ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ವಿಮಾನ ವೇಳಾಪಟ್ಟಿಯ ಬಗ್ಗೆ ಮಾಹಿತಿ ಪಡೆದುಕೊಂಡೆ. ಮಂಗಳೂರಿಗೆ ಹೋಗಬೇಕಿದ್ದ ವಿಮಾನ ತಡವಾಗಿ ಹೊರಡಲಿದೆ ಎಂದು ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿ ಹೇಳಿದರು’ ಎಂದು ಪೋಷಕರನ್ನು ಮಂಗಳೂರಿಗೆ ಕಳುಹಿಸಲು ಬಿಐಎಎಲ್‌ಗೆ ಬಂದಿದ್ದ ಮಹೇಶ್ ಕಾಮತ್ ತಿಳಿಸಿದರು.
‘ಕಿಂಗ್‌ಫಿಷರ್ ಗ್ರಾಹಕ ಸೇವಾ ಕೇಂದ್ರವನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಸಂಸ್ಥೆಯ ಯಾವುದೇ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿಲ್ಲ ಎಂದು ಗ್ರಾಹಕ ಸೇವಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು’ ಎಂದು ಮತ್ತೊಬ್ಬ ಪ್ರಯಾಣಿಕ ರೆವರೆಂಡ್ ಜೆ.ಪ್ರಭಾಕರ್ ಹೇಳಿದರು.
ಸೀಟುಗಳು ಚೆಲ್ಲಾಪಿಲ್ಲಿ..ಬೆಂಕಿ ನುಂಗುವಂತೆ ಬಂತು
ಬೆಂಕಿ ನಮ್ಮ ಸೀಟಿನತ್ತ ವ್ಯಾಪಿಸುತ್ತಿದ್ದಂತೆಯೇ ಸೀಟ್ ಬೆಲ್ಟ್ ಬಿಚ್ಚಿಕೊಂಡು ಹೊರಕ್ಕೆ ಜಿಗಿದೆ. ಹೊರಕ್ಕೆ ಜಿಗಿದಾಗ ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡೆ. ಹೇಗೋ ಮರದಿಂದ ಇಳಿದು ನಡೆದುಕೊಂಡೇ ಕಾವೂರು ರೈಲ್ವೆ ಸ್ಟೇಶನ್ ತಲುಪಿದೆ...
ಮಂಗಳೂರು: ‘ಇನ್ನೇನು 6.30ಕ್ಕೆ ಬಜಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಜೋರಾಗಿ ಅಲ್ಲಾಡುತ್ತಿತ್ತು. ವಿಮಾನ ನಿಲುಗಡೆ ಆಗುವುದಕ್ಕೆ ಮುಂಚೆಯೇ ಒಂದು ಮರಕ್ಕೆ ಅಪ್ಪಳಿಸಿತು. ಚಕ್ರ ಸಿಡಿದ ಸದ್ದು ಕೇಳಿದ ಕೂಡಲೇ ಬೆಂಕಿ ಹೊತ್ತಿಕೊಂಡಿತು. ಕ್ಷಣ ಮಾತ್ರದಲ್ಲಿ ವಿಮಾನದ ಎಲ್ಲ ಭಾಗಗಳು ಛಿದ್ರಗೊಂಡವು. ಸೀಟ್ ಬೆಲ್ಟ್ ಬಿಚ್ಚಿಕೊಂಡು 6 ಅಡಿ ಎತ್ತರದಿಂದ ನಾವು ನಾಲ್ಕು ಮಂದಿ ಜಿಗಿದೆವು. ಒಂದು ವೇಳೆ ಸೀಟ್ ಬೆಲ್ಟ್ ಬಿಚ್ಚಿಕೊಳ್ಳದೇ ಹೋಗಿದ್ದರೆ ಬದುಕುಳಿಯುತ್ತಿರಲಿಲ್ಲ. ಪವಾಡ ಸದೃಶ ರೀತಿ ಬದುಕಿ ಬಂದಿದ್ದೇನೆ. ದೇವರೇ ನನ್ನನ್ನು ರಕ್ಷಿಸಿದ್ದು’...
ಮಂಗಳೂರು ವಿಮಾನ ನಿಲ್ದಾಣದ ಬಳಿ ಶನಿವಾರ ಸಂಭವಿಸಿದ ಏರ್ ಇಂಡಿಯ ವಿಮಾನ ದುರಂತದಲ್ಲಿ ಪವಾಡ ಸದೃಶ ರೀತಿ ಬದುಕಿ ಬಂದ ತಣ್ಣೀರುಬಾವಿಯ ಪ್ರದೀಪ್ ಜಿ.ಕೋಟ್ಯಾನ್ ತಮ್ಮ ಅನುಭವ ಬಿಚ್ಚಿಟ್ಟಿದ್ದು ಹೀಗೆ. ‘ಇದೇ 27ಕ್ಕೆ ಅಣ್ಣನ ಮದುವೆ ನಿಶ್ಚಯವಾಗಿದೆ. ಅದಕ್ಕಾಗಿ 15 ದಿನ ತುರ್ತು ರಜೆ ಕೇಳಿ ಬಂದಿದ್ದೇನೆ. ಸ್ವಲ್ಪ ಏರುಪೇರಾಗಿದ್ದರೂ ನಾನೂ ಉಳಿಯುತ್ತಿರಲಿಲ್ಲ’ ಎಂದು ಹೇಳುವಷ್ಟರಲ್ಲೇ ಪ್ರದೀಪ್ ಜಿ.ಕೋಟ್ಯಾನ್ ಕಣ್ಣಂಚಿನಲ್ಲಿ ನೀರು ತುಂಬಿ ಬಂದಿತ್ತು. ದೇರಾದ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಎರಡು ವರ್ಷಗಳಿಂದ ದುಬೈನಲ್ಲಿದ್ದಾರೆ.
ಕಾಸರಗೋಡಿನ ಕೂಳಿಕುನ್ನು ಉದುಮಾ ಮಾಂಗಾಡ್‌ನ ಕೃಷ್ಣ ಹಾಗೂ ಕಣ್ಣೂರಿನ ಮಾಹಿನ್ ಕುಟ್ಟಿ ಅವರೂ ‘ಬದುಕಿ ಬಂದಿದ್ದೇ ಪವಾಡ’ ಎಂದು ತಮ್ಮ ಅನುಭವವನ್ನು ಪ್ರಜಾವಾಣಿ ಜತೆ ಹಂಚಿಕೊಂಡರು. ಮಂಗಳೂರಿನ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಸರಗೋಡಿನ ಕೂಳಿಕುನ್ನು ಉದುಮಾ ಮಾಂಗಾಡ್‌ನ ಕೃಷ್ಣ (47), ‘ಕಳೆದ 9 ವರ್ಷಗಳಿಂದ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ನೋಡು ನೋಡುತ್ತಿದ್ದಂತೆಯೇ ವಿಮಾನದ ಮುಂಭಾಗ ಹೊತ್ತಿ ಉರಿಯಲಾರಂಭಿಸಿತು. ಬೆಂಕಿ ನಮ್ಮ ಸೀಟಿನತ್ತ ವ್ಯಾಪಿಸುತ್ತಿದ್ದಂತೆಯೇ ಸೀಟ್ ಬೆಲ್ಟ್ ಬಿಚ್ಚಿಕೊಂಡು ಹೊರಕ್ಕೆ ಜಿಗಿದೆ. ಹೊರಕ್ಕೆ ಜಿಗಿದಾಗ ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡೆ. ಹೇಗೋ ಮರದಿಂದ ಇಳಿದು ನಡೆದುಕೊಂಡೇ ಕಾವೂರು ರೈಲ್ವೆ ಸ್ಟೇಶನ್ ತಲುಪಿದೆ ಎಂದರು.
May 23, 2010
Subscribe to:
Post Comments (Atom)
No comments:
Post a Comment