VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಮಂಗಳೂರು ವಿಮಾನ ದುರಂತ

ಬಜ್ಪೆ ವಿಮಾನ ದುರಂತ: ಉಡುಪಿ ಜಿಲ್ಲೆಯ 27 ಮಂದಿ ಬಲಿ
ಮೃತ ತಾಯಿಯನ್ನು ಕಾಣಲು ಬಂದ ಒಂದೇ ಕುಟುಂಬದ ನಾಲ್ವರ ಮೃತ್ಯು


ಉಡುಪಿ, ಮೇ 22: ಬಜ್ಪೆ ವಿಮಾನ ದುರಂತದಲ್ಲಿ ಉಡುಪಿ ಜಿಲ್ಲೆಯ 28 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇವರಲ್ಲಿ ಉಡುಪಿ ತಾಲೂಕೊಂದರಲ್ಲಿ 19 ಮಂದಿ ಹಾಗೂ ಕುಂದಾಪುರದಲ್ಲಿ 8 ಮಂದಿ ಬಲಿಯಾಗಿರುವುದು ಇದುವರೆಗೆ ಬಂದ ಮಾಹಿತಿಯಲ್ಲಿ ಖಚಿತ ಪಟ್ಟಿದೆ. ಇವರಲ್ಲಿ ಬಸ್ರೂರಿನ ಒಂದೇ ಕುಟುಂಬದ ಐದು ಮಂದಿ, ಒಳಕಾಡಿನ ನಾಲ್ವರು ಸೇರಿದ್ದಾರೆ. ಇವರಲ್ಲಿ ಐದು ಮಂದಿ ಮಕ್ಕಳು ಸೇರಿದ್ದಾರೆ.

ಮೃತ ತಾಯಿಯನ್ನು ಕಾಣಲೆಂದು ದುಬೈ ಯಿಂದ ಹೊರಟ ಉಡುಪಿಯ ಒಂದೇ ಕುಟುಂಬದ ಮಕ್ಕಳು ಸೇರಿದಂತೆ ನಾಲ್ವರು ಬಜ್ಪೆ ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.
ಉಡುಪಿ ವಳಕಾಡಿನ ಜಿ.ಎಂ. ಮೆಹಬೂಬ್ ಎಂಬವರ ಮಗ ಮುಹಮ್ಮದ್ ಜಿಹಾದ್ (40), ಅವರ ಪತ್ನಿ ಸಮೀನಾ(34), ಮಕ್ಕಳಾದ ಮೂರೂವರೆ ವರ್ಷದ ಝುಬೈರ್, ಎರಡು ವರ್ಷದ ಝೈನಾಬ್ ಮೃತ ದುರ್ದೈವಿಗಳು.
ಶುಕ್ರವಾರ ಸಂಜೆ ವೇಳೆ ಹೃದಯಾಘಾತದಿಂದ ನಿಧನರಾದ ತಾಯಿ ಅಮೀನಾಬಿ ಅವರನ್ನು ನೋಡಲೆಂದು ಜಿಹಾದ್ ತನ್ನ ಇಬ್ಬರು ಅಣ್ಣ, ಅವರ ಪತ್ನಿ, ಮಕ್ಕಳು, ಒಬ್ಬಳು ತಂಗಿ ಹಾಗೂ ಕುಟುಂಬದೊಂದಿಗೆ ದುಬೈಯಿಂದ ಊರಿಗೆ ಹೊರಟ್ಟಿದ್ದರು. ಆದರೆ ಅವರಲ್ಲಿ ಆರು ಮಂದಿಗೆ ಈ ವಿಮಾನದಲ್ಲಿ ಟಿಕೆಟ್ ಸಿಗಲ್ಲಿಲ್ಲ. ಹೀಗಾಗಿ ಅವರೆಲ್ಲರೂ ಬೆಂಗಳೂರು ಹಾಗೂ ಮುಂಬೈ ಮೂಲಕ ಆಗಮಿಸುವ ಬೇರೆ ವಿಮಾನದಲ್ಲಿ ಟಿಕೆಟ್ ಪಡೆದಿದ್ದರು ಎಂದು ಮೃತರ ಅಣ್ಣ ಮುಹಮ್ಮದ್ ಸದಾಕ್ ತಿಳಿಸಿದ್ದಾರೆ.
ಜಿಹಾದ್ ತನ್ನ ನಾಲ್ಕು ಮಕ್ಕಳಲ್ಲಿ ರೊಹಾನ್(13) ಹಾಗೂ ರಾಬಿಯಾ (10) ಎಂಬವರನ್ನು ದುಬೈಯ ಮನೆಯಲ್ಲೇ ಬಿಟ್ಟಿದ್ದರು.

ಅಲೀಮಾಬಿ ಅವರ ಒಟ್ಟು ಎಂಟು ಮಂದಿ ಮಕ್ಕಳಲ್ಲಿ (ಐದು ಗಂಡು, ಮೂರು ಹೆಣ್ಣು) ಇವರು ಕೊನೆಯವರು.
ಜಿಹಾದ್ ಕಳೆದ 20 ವರ್ಷಗಳಿಂದ ದುಬೈಯಲ್ಲಿ ವ್ಯವಹಾರ ಮಾಡುತ್ತಿದ್ದರು. ಇವರ ಅಣ್ಣ ಡಾ.ಮುಹಮ್ಮದ್ ಇರ್ಶಾದ್ ಅಮೆರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮನ ನಿಧನದ ಸುದ್ದಿ ತಿಳಿದು ಅಲ್ಲಿಂದ ಹೊರಟಿದ್ದಾರೆ. ಮಕ್ಕಳು ಬರುವುದಕ್ಕಾಗಿ ಅಲೀಮಾಬಿಯವರ ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದು ಸಾವು ಗೆದ್ದು ಬಂದವರ ಅನುಭವ...

‘ಗಡಗಡ ನಡುಗಿದ ವಿಮಾನ ’

ರನ್‌ವೇಯಿಂದ ಹೊರಗೆ ಮುಖ ಮಾಡಿದ ವಿಮಾನ ದಟ್ಟ ಹೊಗೆ ಹಾಗೂ ಬೆಂಕಿ ಉಗುಳುತ್ತಾ ಎರಡು ತುಂಡಾಯಿತು. ಅದೃಷ್ಟವಶಾತ್ ನನ್ನ ಸೀಟ್ ಬೆಲ್ಟ್ ಬಿಚ್ಚಿಕೊಂಡಿದ್ದ ಪರಿಣಾಮ ರೆಕ್ಕೆಯ ಬಳಿ ಇದ್ದ ಜಾಗದಿಂದ ಹೊರಗೆ ಧುಮುಕಿದೆ...

ಮಂಗಳೂರು: ‘ವಿಮಾನ ಈಗ ಮಂಗಳೂರು ನಿಲ್ದಾಣದಲ್ಲಿ ಇಳಿಯುತ್ತಿದೆ’ ಎಂದು ಘೋಷಣೆಯಾದ ಕೆಲವೇ ಸೆಕೆಂಡುಗಳಲ್ಲಿ ಕೆಲ ಕಾಲ ದೊಡ್ಡ ಸದ್ದಿನೊಂದಿಗೆ ಕಂಪಿಸಿತು. ಕ್ಷಣ ರನ್‌ವೇನಲ್ಲಿ ನಿಂತಂತೆ ತೋರಿ ಮತ್ತೆ ವೇಗ ಪಡೆದುಕೊಂಡ ವಿಮಾನ ಮರವೊಂದಕ್ಕೆ ಡಿಕ್ಕಿ ಹೊಡೆದದ್ದು ಕಾಣಿಸಿತು.

‘ಮುಂಜಾನೆ ನಿದ್ರೆ ಮಂಪರಿನಲ್ಲಿಯೇ ಕುಡ್ಲ (ಮಂಗಳೂರು) ತಲುಪಿದ ಖುಷಿಯಲ್ಲಿದ್ದ ನಮಗೆ ಏನಾಯಿತು ಎಂದು ಅರಿವಿಗೆ ಬರುವ ಮುನ್ನವೇ ದುರಂತ ಸಂಭವಿಸಿತು’ ಎಂದು ಗದ್ಗದಿತರಾದರು ಉಳ್ಳಾಲ ಉಮರ್ ಫಾರೂಕ್.

ನಗರದ ಎಜೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಮುಖ, ಕೈ-ಕಾಲುಗಳಿಗಾದ ತೀವ್ರ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಉಮರ್, ದುರಂತದ ಷಾಕ್‌ನಿಂದ ಹೊರಬಂದಂತೆ ಕಾಣಲಿಲ್ಲ.

ರನ್‌ವೇಯಿಂದ ಹೊರಗೆ ಮುಖ ಮಾಡಿದ ವಿಮಾನ ದಟ್ಟ ಹೊಗೆ ಹಾಗೂ ಬೆಂಕಿ ಉಗುಳುತ್ತಾ ಎರಡು ತುಂಡಾಯಿತು. ಅದೃಷ್ಟವಶಾತ್ ನನ್ನ ಸೀಟ್ ಬೆಲ್ಟ್ ಬಿಚ್ಚಿಕೊಂಡಿದ್ದ ಪರಿಣಾಮ ರೆಕ್ಕೆಯ ಬಳಿ ಇದ್ದ ಜಾಗದಿಂದ ಹೊರಗೆ ಧುಮುಕಿದೆ. ಆ ಸಂದರ್ಭದಲ್ಲಿ ನನ್ನ ಎದುರು ಇದ್ದ ವ್ಯಕ್ತಿಯೊಬ್ಬರನ್ನು ತಳ್ಳಿ ಹೊರ ಬೀಳಬೇಕಾಯಿತು. ಕೆಳಗೆ ಬಿದ್ದು ಇಳಿಜಾರಿನಲ್ಲಿ ಉರುಳಿದೆ. ಸ್ವಲ್ಪ ಹೊತ್ತಿನಲ್ಲಿಯೇ ದೊಡ್ಡ ಸ್ಫೋಟದೊಂದಿಗೆ ವಿಮಾನ ಹೊತ್ತಿ ಉರಿಯತೊಡಗಿತು. ಚೀರಾಟ, ಆಕ್ರಂದನ ಕೇಳಿಬರುತ್ತಿತ್ತು. ದೇವರ ಕೃಪೆ ನಾನು ಬದುಕಿ ಬಂದೆ ಎಂದು ಸಾವು ಜಯಿಸಿದ ಭಾವದಲ್ಲಿ ಉಮರ್ ತಮ್ಮ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.

ತಮ್ಮನ್ನು ನೋಡಲು ಬಂದವರ ಪ್ರಶ್ನೆಗೆ ಅವರು ನೋವಿನಲ್ಲೂ ಸಮಾಧಾನದಿಂದ ಉತ್ತರ ನೀಡುತ್ತಿದ್ದರು.

ಉಳ್ಳಾಲದ ಹಳೆ ಪೊಲೀಸ್ ಠಾಣೆ ಸಮೀಪದ ನಿವಾಸಿ ಆದಾಯ ತೆರಿಗೆ ಇಲಾಖೆ ನಿವೃತ್ತ ನೌಕರ ಯು.ಪಿ.ಮೊಹಮ್ಮದ್ ಅವರ ಪುತ್ರ ಫಾರೂಕ್ ಪಿಯು ಮುಗಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಬುದಾಬಿಯ ನಿರ್ಮಾಣ ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗಷ್ಟೇ ದುಬೈನ ಮಾರ್ಕೆಟಿಂಗ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದರು. ಹೊಸ ಕೆಲಸದ ವೀಸಾ ಸಂಬಂಧಿ ಕೆಲಸಗಳಿಗಾಗಿ ಮಂಗಳೂರಿಗೆ ಬರುತ್ತಿದ್ದಾಗ ವಿಮಾನ ದುರಂತ ಸಂಭವಿಸಿದೆ.

ಅವಿವಾಹಿತನಾದ ಫಾರೂಕ್‌ಗೆ ಅವರಿಗೆ ಅಮ್ಮ ಹಾಗೂ ತಮ್ಮ ಇದ್ದಾರೆ. ಅಪಘಾತದಲ್ಲಿ ಫಾರೂಕ್ ಅವರ ಎರಡೂ ಕೈಗಳು ತೀವ್ರ ಪ್ರಮಾಣದಲ್ಲಿ ಸುಟ್ಟಿದೆ. ವಿಮಾನದಿಂದ ಹೊರಬಿದ್ದ ನಂತರ ಅರ್ಧ ಕಿ.ಮೀ. ನಡೆದು ರಸ್ತೆಗೆ ಬಂದು ಕುಸಿದು ಬಿದ್ದಿದ್ದಾರೆ. ನಂತರ ಸ್ಥಳೀಯರು ಆಟೋವೊಂದರಲ್ಲಿ ಆಸ್ಪತ್ರೆಗೆ ಕೆರೆತಂದಿದ್ದಾರೆ.

ಸಾವು ಗೆದ್ದ ವೈದ್ಯ ವಿದ್ಯಾರ್ಥಿನಿ: ಬಾಂಗ್ಲಾ ಪ್ರಜೆ ಸಬ್ರೀನಾ (22) ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ. ರಜೆಯ ಹಿನ್ನೆಲೆಯಲ್ಲಿ ದುಬೈನಲ್ಲಿ ನೆಲೆಸಿರುವ ಪೋಷಕರನ್ನು ಭೇಟಿ ಮಾಡಿ ಮಣಿಪಾಲಕ್ಕೆ ಹಿಂತಿರುಗುವಾಗ ವಿಮಾನ ದುರಂತಕ್ಕೀಡಾಗಿದೆ.

ಅಪಘಾತದಲ್ಲಿ ಸಬ್ರೀನಾ ತೀವ್ರ ಗಾಯಗೊಂಡಿದ್ದು, ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಕಾಕ್‌ಪಿಟ್ ಬಳಿ ಕುಳಿತಿದ್ದ ಆಕೆ ವಿಮಾನ ಎರಡು ತುಂಡಾಗುತ್ತಿದ್ದಂತೆಯೇ ಹೊರಗೆ ಎಸೆಯಲ್ಪಟ್ಟಿದ್ದಾರೆ.

ಬದುಕಿ ಬಂದ ಏಕೈಕ ಮಹಿಳೆ: ಅವಘಡದಲ್ಲಿ ಬದುಕಿ ಬಂದ ಏಕೈಕ ಮಹಿಳೆ ಸಬ್ರೀನ್ ನಡೆದಾಡುವಂತಾಗಲು ಕನಿಷ್ಠ ಇನ್ನೂ ಒಂದು ತಿಂಗಳು ಬೇಕು ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್. ಸಬ್ರಿನ್ ತಾಯಿಗೆ ವಿಷಯ ತಿಳಿದಿದ್ದು, ಭಾನುವಾರ ಅವರು ಬರಲಿದ್ದಾರೆ ಎಂದು ಅವರು ಹೇಳಿದರು.

No comments: