VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಆಸ್ಪತ್ರೆಯಲ್ಲಿದ್ದ ಮಗನನ್ನು ನೋಡಲು ಬಂದ ತಂದೆ ಬಲಿ

ಬಜ್ಪೆ: ಬಜ್ಪೆ ಸಮೀಪದ ಪೆರ್ಮುದೆಯ ಮಿನೇಜಸ್ ಕಂಪೌಂಡ್‌ನ ಮೆಲ್ವಿನ್ ಮಿನೇಜಸ್ ವಿಮಾನ ದುರಂತದಲ್ಲಿ ಮೃತಪಟ್ಟ ನತದೃಷ್ಟರಲ್ಲಿ ಸೇರಿದ್ದು, ಅವರು ಅನಾರೋಗ್ಯಪೀಡಿತ ಮಗನನ್ನು ನೋಡಲು ಊರಿಗೆ ಬರುತ್ತಿದ್ದರು.

ರೊಜಾರಿಯೋ ಮಿನೇಜಸ್ ಹಾಗೂ ಫ್ಲೋರಿನ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಮೆಲ್ವಿನ್ ಕಿರಣ್ ಮಿನೇಜಸ್ ಎರಡನೆಯವರು. ಪತ್ನಿ ಹೆಲೆನ್ ಹಾಗೂ ಮಕ್ಕಳ ಜತೆ ವಿದೇಶದಲ್ಲೇ ನೆಲೆಸಿದ್ದ ಮೆಲ್ವಿನ್ ತಮ್ಮ ಪತ್ನಿಯನ್ನು ರಜೆಯಲ್ಲಿ ಮಕ್ಕಳ ಜತೆ ಊರಿಗೆ ಕಳುಹಿಸಿದ್ದರು. ಊರಿಗೆ ಬಂದಿದ್ದ ಹೆಲೆನ್ ಮರಳಿ ಹೋಗವವರಿದ್ದರು. ಆದರೆ ಅಷ್ಟರಲ್ಲಿ ಮಗ ಕ್ಲಿಯೋನ್ (4)ಗೆ ಜ್ವರ ಕಾಣಿಸಿಕೊಂಡಿತ್ತು. ಮಗನನ್ನು ಆಸ್ಪತ್ರೆಗೆ ಸೇರಿಸು. ಕೂಡಲೇ ಬರುವುದಾಗಿ ತಿಳಿಸಿದ್ದ ಮೆಲ್ವಿನ್ ಮಿನೇಜಸ್ ಮನೆಗೆ ಮರಳಲೇ ಇಲ್ಲ.

ಇತರ ಪ್ರಯಾಣಿಕರ ಜತೆ ಮೆಲ್ವಿನ್ ಕೂಡಾ ಸೇರಿದ್ದರು. ಪತ್ನಿ ಹೆಲೆನ್ ಪತಿಯ ಬರುವಿಕೆಗಾಗಿ ಕಾಯುತ್ತಿದ್ದು ಸುದ್ದಿ ತಿಳಿದ ಬಳಿಕ ಅತ್ತು ಸೊರಗಿಹೋಗಿದ್ದಾರೆ. ತಂದೆಯ ಬರುವಿಕೆಗಾಗಿ ಕಾಯುತ್ತಿದ್ದ ಕ್ಲಿಯೋನ್‌ಗೆ ತಂದೆ ಮೃತಪಟ್ಟ ವಿಷಯ ತಿಳಿದಿಲ್ಲ. ಮನೆಯಲ್ಲಿ ಎಲ್ಲರೂ ದು:ಖ ತಡೆಯಲಾರದೆ ರೋದಿಸುತ್ತಿದ್ದರೆ ಹಿರಿಜೀವ ರೊಜಾರಿಯೊ ಮಿನೇಜಸ್ ಸಮಾಧಾನ ಹೇಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಅಂದು ವೀರಪ್ಪ ಮೊಯಿಲಿ ಸ್ವಲ್ಪದರಲ್ಲಿ ಪಾರು
ಮಂಗಳೂರಿನ ಮೊದಲ ವಿಮಾನ ಅವಘಢ

ಮಂಗಳೂರು: ಅಂದು ಆ ಎರಡು ದೊಡ್ಡ ಬಂಡೆಗಳಿಲ್ಲದಿದ್ದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಮೊದಲ ಅವಘಢ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಆಹುತಿ ತೆಗೆದುಕೊಳ್ಳುತ್ತಿತ್ತು. 1981ರಲ್ಲಿ ನಡೆದ ಆ ಘಟನೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ’ಅವ್ರೊ’ ವಿಮಾನವನ್ನು ಕಾಪಾಡಿದ್ದು ರನ್ ವೇ ಆಚೆಗೆ ಸ್ವಲ್ಪ ದೂರದಲ್ಲಿ ಇದ್ದ ಎರಡು ಬಂಡೆಗಳು.

1981ರ ಆಗಸ್ಟ್ 19. ಮಂಗಳೂರು ವಿಮಾನ ನಿಲ್ದಾಣದ ಪ್ರಮುಖ ಘಟನೆಗಳಲ್ಲಿ ನೆನಪಿಡಬೇಕಾದ ದಿನವದು.
ಬೆಂಗಳೂರಿನಿಂದ ಬಂದಿದ್ದ ಇಂಡಿಯನ್ ಏರ್‌ಲೈನ್ಸ್‌ನ ಆ ವಿಮಾನ ಬಜಪೆಯ ವಿಮಾನ ನಿಲ್ದಾಣದ ರನ್‌ವೇ ದಾಟಿ ನಿಗದಿತ ಜಾಗದಲ್ಲಿ ಲ್ಯಾಂಡ್ ಆಗದೆ ಮುನ್ನುಗ್ಗಿ ಹೋಗಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸೂಚನೆಗಳನ್ನು ಉಲ್ಲಂಘಿ ಸಿದ್ದು ಅವಘಡಕ್ಕೆ ಕಾರಣವಾಗಿತ್ತು.

ವಿಮಾನದ ಶೇ. 25 ಭಾಗ ಮಾತ್ರ ರನ್‌ವೇಯಲ್ಲಿ ಇದ್ದು, ಮುಂದಿನ ಬಹುಭಾಗ ಎರಡು ಬಂಡೆಗಳ ಮದ್ಯೆ ಸಿಕ್ಕಿಕೊಂಡಿತ್ತು. ಬಂಡೆಗಳ ಆಕಾರ ಇಲ್ಲದಿದ್ದರೆ ಆ ವಿಮಾನ 250 ಮೀಟರ್ ಆಳದ ಪ್ರಪಾತಕ್ಕೆ ಉರುಳುತ್ತಿತ್ತು. ಈಗಿನ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರೂ ಆ ವಿಮಾನದಲ್ಲಿದ್ದರು!


ವಿಮಾನದ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡರೂ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ನಂದಿಸಿದ್ದರು. ಹಾಗಿದ್ದೂ ವಿಮಾನಕ್ಕೆ ಸಾಕಷ್ಟು ಹಾನಿಯಾಗಿತ್ತು.

’ಅವ್ರೊ’ ವಿಮಾನ ಮಂಗಳೂರಿಗೆ ಬಂದಿದ್ದು ಅದೇ ಕೊನೆ. ನಂತರ ’ಅವ್ರೊ’ ಮಂಗಳೂರು ಆಗಸದಲ್ಲಿ ಕಾಣಬರಲಿಲ್ಲ. ಹಾನಿಗೀಡಾದ ಆ ವಿಮಾನವನ್ನು ನಂತರ ಚೂರು ಮಾಡಿ ಗುಜರಿಗೆ ಹಾಕಬೇಕಾಯಿತು.

No comments: