
ಚಿಕ್ಕಮಗಳೂರು, ಮೇ ೨೭: ಹಸಿವು, ರೋಗ, ಹುಟ್ಟು, ಸಾವು ಎಂಬುದು ಸಾರ್ವತ್ರಿಕ. ಇದಕ್ಕೆ ಜಾತಿ-ಮತದ ಭೇದವಿಲ್ಲ. ಇದನ್ನು ಅರಿತು ಸಮಾಜ ದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಸಹಬಾಳ್ವೆಯ ಜೀವನ ನಡೆಸುವಂತೆ ಕೊಲ್ಯ ಮಠದ ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.ಬುಧವಾರ ಮೂಡಿಗೆರೆ ಬಳಿಯ ಚಕ್ಕಮಕ್ಕಿಯ ಖಲಂದರಿಯ ಅನಾಥಾ ಶ್ರಮದ ದಶಮಾನೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಯೊಂದಿಗೆ ಧರ್ಮ ಪರಿಪಾಲನೆ ಮಾಡು ವಂತೆ ಸ್ವಾಮೀಜಿ ನುಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಷಿ, ಜಾತ್ಯತೀತ ರಾಷ್ಟ್ರದಲ್ಲಿ ಸೌಹಾರ್ದ ಸಂಗಮದಂತಹ ಕಾರ್ಯಕ್ರಮಗಳ ಅಗತ್ಯವಿಲ್ಲ. ಆದರೆ ಪರಿಸ್ಥಿತಿ ಆ ಹಂತಕ್ಕೆ ತಲುಪಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.ಜಾತಿ ಧರ್ಮದ ಭೇದಭಾವ ಇಲ್ಲದಿರುತ್ತಿದ್ದರೆ ಬಹುಶಃ ತಾನು ಇಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಾಗಿರುವ ಅವಶ್ಯಕತೆ ಒದಗಿ ಬರುತ್ತಿ ರಲಿಲ್ಲ ಎಂದು ಖುರೇಷಿ ಹೇಳಿದರು.ಬಜಪೆ ವಿಮಾನ ದುರಂತದಲ್ಲಿ ಮೃತಪಟ್ಟ ಸಹೋದರ-ಸಹೋದರಿ ಯರಿಗೆ ಪರಲೋಕ ಮೋಕ್ಷಕ್ಕಾಗಿ ಹಾಗೂ ಮನೆಯ ಶಾಂತಿಗಾಗಿ ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ದ.ಕ.ಜಮೀಯತುಲ್ ಉಲಮಾ ಮುಶಾವರ ಕರೆ ನೀಡಿದೆ ಎಂದು ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ತಿಳಿಸಿದರು. ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿದರು.ಅನಾಥಾಶ್ರಮದ ಸ್ಥಾಪಕ ಅಬ್ಬಾಸ್ ಹಾಜಿ ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕಿ ಮೋಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಜಯರಾಮ್, ಬಿಜೆಪಿ ಬಣಕಲ್ ಹೋಬಳಿ ಅಧ್ಯಕ್ಷ ಸುರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಯು.ಆರ್.ಉಮಾಪತಿ, ಅಕ್ರಂ ಹಾಜಿ, ಹಂಝ ಮುಸ್ಲಿಯಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
No comments:
Post a Comment