ಮುಂಬೈ: ಜೆಟ್ ಏರ್‌ವೇಸ್ ಮತ್ತು ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ಏರ್‌ಲೈನ್ಸ್ ವಿಮಾನಗಳ ನಡುವೆ ಇಲ್ಲಿನ ಮುಂಬೈ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ತಡರಾತ್ರಿ ನಡೆಯಲಿದ್ದ ಪ್ರಮುಖ ಡಿಕ್ಕಿಯೊಂದು ಸ್ವಲ್ಪದರಲ್ಲಿ ತಪ್ಪಿದ್ದು, ಭಾರಿ ಅನಾಹುತದಿಂದ ಪಾರಾದಂತಾಗಿದೆ. ಎರಡೂ ವಿಮಾನಗಳ ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ.
ಮಂಗಳೂರು ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿ 158 ಜನರು ಬಲಿಯಾದ ಪ್ರಕರಣ ಇನ್ನೂ ಸಜೀವವಾಗಿರುವಾಗಲೇ ಈ ಆತಂಕಕಾರಿ ಘಟನೆ ನಡೆದಿದೆ.
ಮುಂಬೈ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಕೇಂದ್ರ (ಎಟಿಸಿ) ಸಕಾಲದಲ್ಲಿ ಎಚ್ಚೆತ್ತು ಅವಘಡವನ್ನು ಸ್ವಲ್ಪದರಲ್ಲಿ ತಪ್ಪಿಸಿದೆ. ಆದರೆ ಇದೀಗ ಘಟನೆಯ ಕಾರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಎಂಐಎಎಲ್), ನಿಲ್ದಾಣವನ್ನು ನಿರ್ವಹಿಸುತ್ತಿರುವ ಜಿವಿಕೆ ನೇತೃತ್ವದ ಒಕ್ಕೂಟ, ಎಟಿಸಿ ಹಾಗೂ ಇಂಡಿಗೊ ಏರ್‌ಲೈನ್ಸ್ ನಡುವೆ ಪರಸ್ಪರ ಕೆಸರೆರಚಾಟ ಆರಂಭವಾಗಿದೆ.
ನಿಲ್ದಾಣದ ಟ್ಯಾಕ್ಸಿ ಮಾರ್ಗದಲ್ಲಿದ್ದ ಕ್ಷೀಣ ಬೆಳಕು ಗೊಂದಲಕ್ಕೆ ಕಾರಣ ಎಂಬ ಆಘಾತಕಾರಿ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ.
ಕೋಲ್ಕತ್ತದಿಂದ ಬಂದಿದ್ದ ಜೆಟ್ ಏರ್‌ವೇಸ್ ವಿಮಾನ ಮುಖ್ಯ ರನ್‌ವೇಯಲ್ಲಿ ರಾತ್ರಿ 9.04ಕ್ಕೆ ಇಳಿಯಬೇಕಿತ್ತು. ಆದರೆ ಟೇಕಾಫ್‌ಗೆ ಕೆಲವೇ ಸಮಯದ ಮುನ್ನ ಟ್ಯಾಕ್ಸಿ ಮಾರ್ಗ ‘ಎನ್’ನಲ್ಲಿ ಇರಬೇಕಿದ್ದ ಮುಂಬೈ- ಬೆಂಗಳೂರು ವಿಮಾನ ಅದೇ ರನ್‌ವೇಯಲ್ಲಿ ಇಳಿದಿತ್ತು.
ಕೂಡಲೇ ಎಚ್ಚೆತ್ತ ಎಟಿಸಿಯು ಕೆಳಗಿಳಿಯದೆ ಹಾಗೇ ಹಾರಾಡುತ್ತಿರುವಂತೆ ಜೆಟ್ ಏರ್‌ವೇಸ್ ವಿಮಾನಕ್ಕೆ ಸೂಚಿಸಿ, ಬೆಂಗಳೂರು ವಿಮಾನ ಮುಖ್ಯ ರನ್‌ವೇಯಿಂದ ಹೊರಹೋಗಲು ಅವಕಾಶ ಕಲ್ಪಿಸಿತು.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಅಂಶವೆಂದರೆ, ಟ್ಯಾಕ್ಸಿ ಮಾರ್ಗದ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರ ಲಿಲ್ಲ. ಇದರಿಂದ ಅಲ್ಲಿಗೆ ಹೋಗಬೇಕೆಂದು ತಿಳಿಯದ ಇಂಡಿಗೊ ಏರ್‌ಲೈನ್ಸ್‌ನ ಪೈಲಟ್ ಮುಖ್ಯ ರನ್‌ವೇಗೇ ವಿಮಾನವನ್ನು ಕೊಂಡೊಯ್ದರು.
ಈ ಪೈಲಟ್‌ನ ಹೆಸರನ್ನು ಕರ್ತವ್ಯದ ಪಟ್ಟಿಯಿಂದ ತೆಗೆದುಹಾಕಿ ಘಟನೆಯ ಪೂರ್ಣ ಪ್ರಮಾಣದ ತನಿಖೆಗೆ ಆದೇಶಿಸಲಾಗಿದೆ. ಜೆಟ್ ಏರ್‌ವೇಸ್ ಸಿಬ್ಬಂದಿ, ಪ್ರತಿಕ್ರಿಯೆಗಾಗಿ ಪ್ರಯತ್ನಿಸಿದ ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿಲ್ಲ.
Subscribe to:
Post Comments (Atom)
No comments:
Post a Comment