VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ನಕ್ಸಲರ ರಕ್ತದಾಹ ಬಲಿ ಸಂಖ್ಯೆ 98; ಕಾರಣ ಅಸ್ಪಷ್ಟ


ಶುಕ್ರವಾರ 98 ಮಂದಿಯನ್ನು ಬಲಿತೆಗೆದುಕೊಂಡು ಇನ್ನೂರೈವತ್ತರಷ್ಟು ಮಂದಿ ಮುಗ್ಧ ಜನರನ್ನು ಗಾಯಾಳುಗಳನ್ನಾಗಿ ಮಾಡಿದ ನಕ್ಸಲರ ದುಷ್ಕೃತ್ಯಕ್ಕೆ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ನಿಜಕ್ಕೂ ಸಿಲುಕಿದ್ದು ಹೇಗೆ, ಅಲ್ಲಿ ಏನಾಗಿತ್ತು ಎಂಬ ಅಂಶವಂತೂ ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕೆ ಬಾಂಬ್ ಸ್ಫೋಟ ಕಾರಣವೇ, ಹಳಿಯನ್ನು ಸ್ಫೋಟಿಸಿದ್ದೇ ಅಥವಾ ಬೇರಾವುದೇ ಕಾರಣವಿದೆಯೇ ಎಂಬುದಿನ್ನೂ ನಿಖರವಾಗಿಲ್ಲ.

ಇದು ವಿಧ್ವಂಸಕ ಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆದರೆ ಹಳಿ ತಪ್ಪುವಂತೆ ಮಾಡುವಲ್ಲಿ ಯಾವುದಾದರೂ ಸ್ಫೋಟಕಗಳನ್ನು ಬಳಸಲಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಮಧ್ಯೆ, ಘಟನೆಯಲ್ಲಿ ರೈಲಿನ ಅವಶೇಷಗಳೆಡೆಯಿಂದ ಹೊರಗೆಳೆಯಲಾದ ಮೃತದೇಹಗಳ ಸಂಖ್ಯೆ ಶನಿವಾರ ಬೆಳಿಗ್ಗೆ 98ಕ್ಕೇರಿದೆ.

ಒಟ್ಟಾರೆ ನಡೆದಿದ್ದೇನೆಂದರೆ, ಹೌರಾದಿಂದ ಮುಂಬಯಿಗೆ ರೈಲು ಹೊರಟದ್ದು ಗುರುವಾರ ರಾತ್ರಿ 10.30ಕ್ಕೆ. ಮಧ್ಯರಾತ್ರಿ 1.30ರ ಸುಮಾರಿಗೆ ಅದು ಸರಿಧಾ ಎಂಬಲ್ಲಿ ಹಳಿ ತಪ್ಪಿತು. ಕೆಲವು ಬೋಗಿಗಳು ಸಮೀಪದ ಹಳಿಗೆ ಬಿದ್ದವು. ಅದೇ ಸಮಯದಲ್ಲಿ ಎದುರಿನಿಂದ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಗೂಡ್ಸ್ ರೈಲು, ಈ ಮಗುಚಿಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆಯಿತು. ಕೋಚ್‌ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಒಡೆದು ಹೋದಾಗ, ಪ್ರಯಾಣಿಕರು ಅದರೆಡೆ ಸಿಲುಕಿಬಿದ್ದರು.

ರೈಲು ಹಳಿ ತಪ್ಪಲು ಬಾಂಬ್ ಸ್ಫೋಟವೇ ಕಾರಣ ಎಂದು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಹೇಳುತ್ತಲೇ ಬಂದಿದ್ದರು. ಇದೇ ರೀತಿಯ ವರದಿಯನ್ನು ಸುರಕ್ಷತಾ ನಿರೀಕ್ಷಕರು ಕೂಡ ನೀಡಿದ್ದಾರೆ. ಹಳಿಯಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಟಿಎನ್‌ಟಿ ಸ್ಫೋಟಕಗಳು ಪತ್ತೆಯಾಗಿದ್ದವು ಎನ್ನುತ್ತಾರೆ ನೈಋತ್ಯ ರೈಲ್ವೇ ಅಧಿಕಾರಿಗಳು.

ಆದರೆ ರೈಲ್ವೇ ಮಂಡಳಿಯ ಟ್ರಾಫಿಕ್ ವಿಭಾಗದ ಸಿಬ್ಬಂದಿ ವಿವೇಕ್ ಸಹಾಯ್ ಹೇಳುವಂತೆ, ರೈಲಿನ ಚಾಲಕನಿಗೆ ದೊಡ್ಡ ಸದ್ದು ಕೇಳಿಸಿತಂತೆ. ಹಳಿಯಲ್ಲಿ ಏನಾದರೂ ಇರಿಸಲಾಗಿತ್ತೇ, ಅಥವಾ ಕೀಲು ತಪ್ಪಿಸಲಾಗಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆಯಂತೆ.

ಗೃಹ ಸಚಿವ ಚಿದಂಬರಂ ಹೇಳುವಂತೆ, ಇದು ವಿಧ್ವಂಸಕ ಸಂಚು ಆಗಿದ್ದು, ಹಳಿಯ ಒಂದು ಭಾಗವನ್ನು ತೆಗೆಯಲಾಗಿತ್ತು. ಆದರೂ ಸ್ಫೋಟಕ ಬಳಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲವಂತೆ.

ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿಗಳ ಪ್ರಕಾರ, ರೈಲು ಹಳಿಯಲ್ಲಿ ಜೋಡಣಾ ಸಾಧನವಾಗಿರುವ ಫಿಶ್ ಪ್ಲೇಟ್‌ಗಳನ್ನು ಕೀಳಲಾಗಿದೆ ಮತ್ತು ಪಾಂಡ್ರಲ್ ಕ್ಲಿಪ್‌ಗಳೂ (ಹಳಿಯನ್ನು ಕಾಂಕ್ರೀಟ್ ಸ್ಲಾಬ್‌ಗಳಿಗೆ ಬಂಧಿಸುವ ಕ್ಲಿಪ್) ನಾಪತ್ತೆಯಾಗಿವೆ. ಹಳಿ ತಪ್ಪಲು ಇದೇ ಕಾರಣವಂತೆ.

ಈಗಾಗಲೇ ಈ ಕೃತ್ಯ ಎಸಗಿದ್ದು ತಾವು ಎಂದು ಪಿಸಿಪಿಎ (ಪೀಪಲ್ಸ್ ಕಮಿಟಿ ಅಗೇನ್‌ಸ್ಟ್ ಪೊಲೀಸ್ ಅಟ್ರಾಸಿಟೀಸ್) ಎಂಬ ಮಾವೋವಾದಿ ಸಂಘಟನೆ ಹೇಳಿಕೊಂಡಿದೆಯಾದರೂ, ಹೇಗೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತನಿಖೆ ನಡೆಯುತ್ತಿದೆ.

No comments: