ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಹೊರವಲಯದಲ್ಲಿ ಸಂಭವಿಸಿದ ವಿಮಾನ ದುರಂತಗಳಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಯೊಂದು ಘಟನೆಯೂ ಕುತೂಹಲಕರ ಸಂಗತಿಯಿಂದ ಕೂಡಿರುವುದು ವಿಶೇಷ. ವಿಮಾನ ನೆಲಕ್ಕುರುಳಿದರೂ ಪೈಲಟ್ ಆಶ್ಚರ್ಯಕರ ರೀತಿಯಲ್ಲಿ ಪಾರಾದರೆ, ಪೈಲಟ್ ನೂರಾರು ಜನರ ಪ್ರಾಣ ಉಳಿಸಿದ ಘಟನೆಗಳೂ ನಡೆದಿವೆ.
ಕುಮಾರಸ್ವಾಮಿಲೇಔಟ್‌ನ ಗೌಡನಪಾಳ್ಯದಲ್ಲಿ 2008ರಲ್ಲಿ ಸಂಭವಿಸಿದ್ದ ಲಘು ವಿಮಾನ ದುರಂತದಲ್ಲಿ ನಾಲ್ಕು ಮಂದಿ ಸಾವನ್ನ ಪ್ಪಿದ್ದರು. ಕೇರಳದ ‘ಜಾಯ್ ಅಲುಕಾಸ್’ ಆಭರಣ ಅಂಗಡಿಗೆ ಸೇರಿದ ನಾಲ್ಕು ಸೀಟಿನ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಆರು ನಿಮಿಷಗಳಲ್ಲಿ ತಾಂತ್ರಿಕ ದೋಷ ದಿಂದಾಗಿ ಗೌಡನಪಾಳ್ಯದ ಕೆರೆಯೊಂದಕ್ಕೆ ಬಿದ್ದಿತ್ತು. ವಿಮಾನದ ಪೈಲೆಟ್ ತೋರಿದ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ವೊಂದು ತಪ್ಪಿತ್ತು.
ಗೌಡನಪಾಳ್ಯದ ವಸತಿ ಪ್ರದೇಶದ ಮೇಲೆ ವಿಮಾನ ಬೀಳಬೇಕಾಗಿದ್ದನ್ನು ತಪ್ಪಿಸಿದ ಆತ ತೆಂಗಿನ ಮರಕ್ಕೆ ಡಿಕ್ಕಿ ಹೊಡೆಸಿ ಕೆರೆಗೆ ಬೀಳುವಂತೆ ಮಾಡಿದ್ದ. ವಸತಿ ಪ್ರದೇಶದ ಮೇಲೆ ವಿಮಾನ ಪತನವಾಗಿದ್ದರೆ ನೂರಾರು ನಾಗರಿಕರು ಸಾಯುವ ಸಂಭವವಿತ್ತು. ಈ ದುರಂತದಲ್ಲಿ ಸುನಿಲ್ ಜೋಸೆಫ್, ಸಂತೋಷ್ ಕುಮಾರ್. ಷಣ್ಮುಗಂ ಮತ್ತು ಮಹಮ್ಮದ್ ಬಷೀರ್ ಎಂಬುವರು ಸಾವನ್ನಪ್ಪಿದ್ದರು. ನಗರದ ಹೊರವಲಯದ ಬಿಡದಿ ಸಮೀಪ ಶೇಷಗಿರಿಹಳ್ಳಿಯಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಸರಸ್ ಲಘು ವಿಮಾನ ತಾಂತ್ರಿಕ ದೋಷದಿಂದ ಉರುಳಿ ಬಿದ್ದಿತ್ತು. ವಿಮಾನ ನೆಲಕ್ಕೆ ಅಪ್ಪಳಿಸಿದಾಗ ಬೆಂಕಿ ಹೊತ್ತಿಕೊಂಡು ವಾಯುಪಡೆಯ ವಿಂಗ್ ಕಮಾಂಡರ್‌ಗಳಾದ ಪ್ರವೀಣ್, ಷಾ ಹಾಗೂ ಸ್ಕ್ವಾಡ್ರನ್ ಲೀಡರ್ ಇಳಯರಾಜ ಸಜೀವವಾಗಿ ದಹನವಾಗಿದ್ದರು. ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯಕ್ಕೆ (ಎನ್‌ಎಎಲ್) ಸೇರಿದ ‘ಸರಸ್’ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಅದರ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಪರಿಣಾಮ ಆಕಾಶದಲ್ಲಿ ಎರಡು ಸುತ್ತು ಗಿರಕಿ ಹೊಡೆದ ವಿಮಾನ ಕೆಳಗೆ ಬಿದ್ದು ಸ್ಫೋಟಗೊಂಡಿತ್ತು.
ವೈಮಾನಿಕ ಪ್ರದರ್ಶನಪೂರ್ವ ಹಾರಾಟ ನಡೆಸುತ್ತಿದ್ದ ಎಚ್‌ಎಎಲ್‌ನ ಲಘು ಹೆಲಿಕಾಪ್ಟರ್ ನೆಲಕ್ಕುರುಳಿತ್ತು. ಪೈಲಟ್ ಸಾವನ್ನಪ್ಪಿದ್ದರು. ರಕ್ಷಣಾ ಸಚಿವಾಲಯ ಈ ವೈಮಾನಿಕ ಪ್ರದರ್ಶನ ಏರ್ಪಡಿಸಿತ್ತು. ಮಿಗ್ ವಿಮಾನವೊಂದು ನೆಲಕ್ಕುರುಳಿ ಸಂಭವಿಸಿದ ಅವಘಡ ದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದ ಘಟನೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ 2005ರಲ್ಲಿ ನಡೆದಿತ್ತು. ಜಕ್ಕೂರು ವಿಮಾನ ನಿಲ್ದಾಣದ ಬಳಿ ವಿಮಾನ ನೆಲಕ್ಕೆ ಅಪ್ಪಳಿಸಿದ ಪರಿಣಾಮ ನಟಿ ಸೌಂದರ್ಯ ಸಾವನ್ನಪ್ಪಿದ್ದರು. ಅವರ ಸಹೋದರ ಅಮರನಾಥ್, ಬಿಜೆಪಿ ರಮೇಶ್ ಕದಂ ಮತ್ತು ಪೈಲಟ್ ಜಾಯ್ ಪಿಲಿಪ್ಸ್ ಸಾವನ್ನಪ್ಪಿದ್ದರು.
May 23, 2010
Subscribe to:
Post Comments (Atom)
No comments:
Post a Comment