ನಿಸ್ವಾರ್ಥ ಸಮಾಜ ಸೇವಕ ಅಮ್ಮಿಞ
ಮಂಗಳೂರು, ಮೇ 24: ಇವರ ಹೆಸರು ಅಬ್ದುಲ್ ಹಮೀದ್ ಅಲಿ ಯಾನೆ ಅಮ್ಮಿಞ. ಊರು ಮಂಜೇಶ್ವರದ ಉದ್ಯಾವರ ಮಾಡ. ವಯಸ್ಸು 51. ಕಟ್ಟುಮಸ್ತಾದ ಶರೀರ, ತಲೆಯಲ್ಲೊಂದು ಬಿಳಿಯ ಟೋಪಿ, ಅರೆ ಹಣ್ಣಾದ ಗಡ್ಡ. ವಿಮಾನ ದುರಂತದ ಬಳಿಕ ಕಳೆದ ಶನಿವಾರ ಬೆಳಗ್ಗಿನಿಂದ ರವಿವಾರ ರಾತ್ರಿವರೆಗೆ ವೆನ್‌ಲಾಕ್ ಆಸ್ಪತ್ರೆಯ ಶವಾಗಾರ ದಲ್ಲಿ ಅವರ ಸೇವೆ ಹಾಗೂ ಅವಿರತ ಶ್ರಮ ನೋಡಿದಾಗ ಇವರೊಬ್ಬ ಮಹಾನ್ ವ್ಯಕ್ತಿ ಎಂದು ಅನಿಸದಿರದು.
ಮೃತದೇಹಗಳ ಗುರುತು ಪತ್ತೆಗಾಗಿ ಮೃತರ ಬಂಧುಗಳಿಗೆ ಸಹಕಾರ, ಬಳಿಕ ಅಧಿಕಾರಿಗಳಿಂದ ದೃಢೀಕರಣ ಪಡಿಸಿ ಸಂಬಂಧಿಕರಿಗೆ ಹಸ್ತಾಂತರ, ಅನಂತರ ಮೃತದೇಹವನ್ನು ತಾವೇ ಖುದ್ದಾಗಿ ಎತ್ತಿಕೊಂಡು ಆಂಬ್ಯುಂಬುಲೆನ್ಸ್‌ಗೆ ಸಾಗಿಸಿ ಮೃತರ ಬಂಧುಗಳಿಗೆ ಸಾಂತ್ವನ ಹೇಳಿ ಕಳುಹಿಸುವ ದೃಶ್ಯವನ್ನು ನೋಡಿದರೆ ಇವರ ನಿಸ್ವಾರ್ಥ ಸೇವೆಯ ಬಗ್ಗೆ ಹೆಮ್ಮೆ ಎನಿಸದಿರದು.
ವಿಮಾನ ದುರಂತ ಸಂಭವಿಸಿದಾಕ್ಷಣದಿಂದ ಬಹಳಷ್ಟು ಯುವಕರು ಸೇರಿದಂತೆ ಹಲವು ಕಾರ್ಯಕರ್ತರು ತಮ್ಮಿಂದಾದ ರೀತಿಯಲ್ಲಿ ಸೇವಾ ಕಾರ್ಯ ಮಾಡಿದ್ದಾರೆ. ಆದರೆ ಈ ಅಮ್ಮಿಞ ಮಾತ್ರ ಸ್ವಭಾವತಃ ಸಮಾಜ ಸೇವಕ. ಕಾಸರಗೋಡು, ಉಪ್ಪಳ ಸೇರಿದಂತೆ ತಮ್ಮ ಊರಿನ ಸುತ್ತಮುತ್ತ ಯಾವುದೇ ಜಾಗದಲ್ಲಿ ರಸ್ತೆ ಅಪಘಾತ, ನೀರಿನಲ್ಲಿ ಮುಳುಗಿದರೆ, ನೇಣು ಹಾಕಿಕೊಂಡಲ್ಲಿ ಅಮ್ಮಿಞ ನೆರವಿಗೆ ಹಾಜರಾಗಿರುತ್ತಾರೆ.
ಕಳೆದ ಸುಮಾರು 40 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಿರುವ ಅಮ್ಮಿಞ ವೃತ್ತಿಯಲ್ಲಿ ಕೋಳಿ ವ್ಯಾಪಾರಿ. ಆದರೆ ಯಾವುದೇ ದುರ್ಘಟನೆ ಸಂಭವಿಸಿದಾಗ ವ್ಯಾಪಾರವನ್ನೇ ನಿಲ್ಲಿಸಿ ನೆರವಿಗೆ ಧಾವಿಸುವ ಮಹಾನುಭಾವ. ಮೇ 22ರಂದು ಬೆಳಗ್ಗೆ ವಿಮಾನ ದುರುಂತದ ಸುದ್ದಿ ತಿಳಿದಾಕ್ಷಣ ಅಮ್ಮಿಞ ನೇರವಾಗಿ ಕೆಂಜಾರು ದುರಂತ ಸ್ಥಳಕ್ಕೆ ಧಾವಿಸಬೇಕೆಂದುಕೊಂಡರು. ಆದರೆ ಮಂಜೇಶ್ವರದಿಂದ ಅಲ್ಲಿಗೆ ಪ್ರಯಾಣಿಸಿದರೆ ತಡವಾಗಬಹುದು ಎಂದು ಯೋಚಿಸಿ ಅವರು ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದರು.
ಅಂದು 9 ಗಂಟೆಯ ಸುಮಾರಿಗೆ ಅಮ್ಮಿಞ ತಮ್ಮ ಊರಿನ ಇತರ 10 ಜನರೊಂದಿಗೆ ಈ ಶವಾಗಾರಕ್ಕೆ ಆಗಮಿಸಿದ್ದರು. ರವಿವಾರ ರಾತ್ರಿ 9 ಗಂಟೆಯವರೆಗೆ ಅವರು ಇದೇ ಶವಾಗಾರದಲ್ಲಿ ಗುರುತುಪತ್ತೆಯಾಗಿ ದೃಢೀಕೃತಗೊಂಡ ಮೃತದೇಹಗಳನ್ನು ಆಂಬ್ಯುಲೆನ್ಸ್‌ಗೆ ಸಾಗಿಸುವಲ್ಲಿ ನೆರವಾದರು. ಅಮ್ಮಿಞ ಮತ್ತವರ ತಂಡ ಸುಮಾರು 80ರಷ್ಟು ಮೃತದೇಹಗಳನ್ನು ಆಂಬ್ಯುಲೆನ್ಸ್‌ಗೆ ಸಾಗಿಸುವ ಕೆಲಸ ನಿರ್ವಹಿಸಿದ್ದರೆ, ಖುದ್ದು ಅಮ್ಮಿಞ ಅವರೊಬ್ಬರೇ 25ರಷ್ಟು ಮೃತದೇಹಗಳನ್ನು ತಮ್ಮ ಕೈಗಳಲ್ಲೇ ಎತ್ತಿಕೊಂಡು ಆಂಬ್ಯುಲೆನ್ಸ್‌ನೊಳಕ್ಕೆ ಹಾಕಿದ್ದಾರೆ.
‘‘ಇದೊಂದು ಪುಣ್ಯ ಕಾರ್ಯವೆಂದು ತಿಳಿದು ಚಿಕ್ಕ ವಯಸ್ಸಿನಿಂದಲೂ ಈ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದೇನೆ. ಇದರಿಂದ ಮನಸ್ಸಿಗೆ ಸಂತಸ ಸಿಗುತ್ತದೆ’’ ಎನ್ನುತ್ತಾರೆ ರಾಜಕೀಯವಾಗಿಯೂ ಗುರುತಿಸಿಕೊಂಡಿರುವ ಅಮ್ಮಿಞ.
ಪ್ರಾಣ ಉಳಿಸಲು ನಮ್ಮಿಂದಾದ ಪ್ರಯತ್ನ: ಗಿರೀಶ್
ಮಂಗಳೂರು, ಮೇ 24: ‘‘ಭೀಕರ ಶಬ್ಧ ಕೇಳಿ ನಾನು ಹಾಗೂ ನೆರೆಕರೆಯವರು ಆ ಸ್ಥಳಕ್ಕೆ ಧಾವಿಸಿದೆವು. ವಿಮಾನ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಮೊದಲು ಮಗುವಿನ ಅಳು. ಅದರತ್ತ ಧಾವಿಸಿ ಅದನ್ನೆತ್ತಿ ಆಸ್ಪತ್ರೆಗೆ ಸಾಗಿಸಲು ಮುಂದಾದೆವು. ನಂತರ ಹತ್ತಿರದಿಂದ ನೀರು ತಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದೆವು. ಅಷ್ಟರಲ್ಲಿ ಅಲ್ಲಿಗೆ ಪೊಲೀಸರ ಆಗಮನವಾಗಿತ್ತು. ಬಳಿಕ ಅಗ್ನಿಶಾಮಕ ದಳ ಅಲ್ಲಿಗೆ ಆಗಮಿಸಿತ್ತು. ನಂತರ ಶವಗಳನ್ನು ಮೇಲೆಕ್ಕೆತ್ತುವ ಕಾರ್ಯದಲ್ಲಿ ತೊಡಗಿಕೊಂಡೆ’’ ಎನ್ನುತ್ತಾರೆ ಕೆಂಜಾರು ಅದ್ಯಪಾಡಿ ನಿವಾಸಿ ಗಿರೀಶ್.
ವೃತ್ತಿಯಲ್ಲಿ ವ್ಯಾಪಾರಿ ಆಗಿರುವ ಗಿರೀಶ್ ದುರ್ಘಟನೆಯ ದಿನದಂದು ಬೆಳಗ್ಗೆ ತಮ್ಮ ಮನೆಯಲ್ಲಿದ್ದಾಗ ಭೀಕರ ಸದ್ದು ಕೇಳಿ ತಮ್ಮ ನೆರೆಕರೆಯವರ ಜೊತೆ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ತಮ್ಮ ಕಣ್ಣೆದುರೇ ಹೊತ್ತಿ ಉರಿಯುತ್ತಿದ್ದ ವಿಮಾನದಲ್ಲಿದ್ದವರನ್ನು ಬದುಕಿಸಬೇಕೆಂಬ ಬಯಕೆ ಗಿರೀಶ್ ಅವರಲ್ಲಿತ್ತಾದರೂ, ಆ ಹೊತ್ತಿಗಾಗಲೇ ವಿಮಾನ ಸುಟ್ಟು ಹೋಗಿತ್ತು. ಅದರ ಜೊತೆ ವಿಮಾನದಲ್ಲಿದ್ದವರೂ ಅರೆಬರೆ ಬೆಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಗಿರೀಶ್ ಹಾಗೂ ಸ್ಥಳೀಯರು ಸಿಕ್ಕಿದ್ದಲ್ಲಿಂದ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು.
‘ರಾಮಾಯಣದ ಕಥೆಯಲ್ಲಿ ಬರುವಂತೆ ರಾಮನ ಸೇತುವೆ ನಿರ್ಮಾಣದಲ್ಲಿ ಅಳಿಲೊಂದು ಸೇವೆ ಮಾಡಿದಂತೆ’ ಗಿರೀಶ್ ಹಾಗೂ ಇತರರು ಆರಂಭದಲ್ಲಿ ಬೆಂಕಿ ನಂದಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆಂಬುದು ಉಲ್ಲೇಖನೀಯ. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಆ ಮೇಲೆ ನಡೆದಿದ್ದು ಮೃತದೇಹಗಳನ್ನು ಮೇಲೆತ್ತುವ ಕೆಲಸ. ಪೊಲೀಸರ ಜೊತೆ ಗಿರೀಶ್ ಅವರೂ ತಮಗಾದ ರೀತಿಯಲ್ಲಿ ಬೆಳಗ್ಗಿನಿಂದ ರಾತ್ರಿ ಈ ಪ್ರದೇಶದಲ್ಲಿ ಕಾರ್ಯಾಚರಣೆ ಸ್ಥಗಿತಗೊಳ್ಳುವವರೆಗೂ ಶವಗಳನ್ನು ಮೇಲೆತ್ತುವಲ್ಲಿ ಸಹಕರಿಸಿದ್ದಾರೆ.
Subscribe to:
Post Comments (Atom)
No comments:
Post a Comment