May 20, 2010
ಜೆಡಿಎಸ್, ಕಾಂಗ್ರೆಸ್ ವರಿಷ್ಠರಿಂದ ರಾಜ್ಯಪಾಲರ ಭೇಟಿ
ರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಮನವಿ :ಎಚ್.ಡಿ.ದೇವೇಗೌಡ
ಬೆಂಗಳೂರು, ಮೇ 19: ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಸಚಿವ ಜನಾರ್ದನ ರೆಡ್ಡಿಯವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್‌ರಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ದಿಢೀರ್ ಬೆಳವಣಿಯೊಂದರಲ್ಲಿ ರಾಜಭವನಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಅರಿವಿದೆ. ಅವರು ಎಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ. ತಾನು ಅವರಿಗೆ ವಿಶೇಷವಾಗಿ ವಿವರಿಸುವ ಅಗತ್ಯವಿಲ್ಲ ಎಂದರು.
ರಾಜ್ಯ ಸರಕಾರ ಕೇಂದ್ರದ ಹಣವನ್ನು ಸದುಪಯೋಗ ಮಾಡಿಕೊಂಡಿಲ್ಲ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮಳೆಗಾಲ ಬಂದರೂ ಸಮರ್ಪಕವಾಗಿ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ವಯ ತಾನು ಎಲ್ಲ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿಯವರೆಗೂ 113 ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ ಎಂದು ದೇವೇಗೌಡ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನಗರದಲ್ಲಿ ಪಾದಯಾತ್ರೆ ನಡೆಸಿ 600ರಿಂದ 800 ಕೋಟಿ ರೂಪಾಯಿ ಸಂಗ್ರಹ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಸಾರ್ವಜನಿಕರಿಂದ ಕೇವಲ ಎರಡೂವರೆ ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸರಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಮೂರು ಸಾವಿರ ಕೋಟಿ ರೂ.ಬಂದಿದೆ. ರಾಜ್ಯದಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ.
ರಾಜ್ಯ ಸರಕಾರ ಕೇಂದ್ರದ ಹಣವನ್ನು ಇತ್ತೀಚಿನ ಚುನಾವಣೆಗಳಿಗಾಗಿ ಬಳಕೆ ಮಾಡಿದೆ ಎಂಬ ಸಂಶಯವಿದೆ ಎಂದು ದೇವೇಗೌಡ ಟೀಕಿಸಿದರು. ಇದೇ ವೇಳೆ ರಾಜಭವನದಿಂದ ಹೊರ ಬಂದ ದೇವೇಗೌಡರಿಗೆ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷರ ನೇತೃತ್ವದ ಸಮಿತಿ, ಸಚಿವ ಸುಧಾಕರ್‌ರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಮನವಿ ಪತ್ರ ಸಲ್ಲಿಸಿತು. ಅವ್ಯವಹಾರ ಆರೋಪ ಎದುರಿಸುತ್ತಿರುವ ಸಚಿವ ಸುಧಾಕರ್‌ರನ್ನು ಸಂಪುಟದಿಂದ ಕೈಬಿಡಬೇಕು ಎಂದು ಗೌಡರು ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು, ಮೇ 19: ಕಾಂಗ್ರೆಸ್ ನಾಯಕರು ರಾಜ್ಯಪಾಲ ಎಚ್.ಆರ್.ಭಾರಧ್ವಾಜ್‌ರನ್ನು ಬುಧವಾರ ಭೇಟಿ ಮಾಡಿ, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಚಿವರಾದ ರೆಡ್ಡಿ ಸಹೋದರರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ನ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ, ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ರಾಜ್ಯಪಾಲರನ್ನು ಭೇಟಿ ಮಾಡಿದರು.
ಸಚಿವ ಜನಾರ್ದನ ರೆಡ್ಡಿ ಮಾಲಕತ್ವದ ಓಬಳಾಪುರಂ ಗಣಿಗಾರಿಕೆ ಕಂಪೆನಿ ಬಳ್ಳಾರಿ ಜಿಲ್ಲೆಯಲ್ಲಿರುವ ರಾಜ್ಯದ ಗಡಿಯನ್ನು ಒತ್ತುವರಿ ಮಾಡಿಕೊಂಡು, ಅಕ್ರಮ ಗಣಿಗಾರಿಕೆ ನಡೆಸುತ್ತಿದೆ. ಇದೇ ವೇಳೆ ರೆಡ್ಡಿ ಸೋದರರು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಈ ಬಗ್ಗೆ ವಿವರಣೆ ಕೇಳಿರುವ ರಾಜ್ಯಪಾಲರ ವಿರುದ್ಧವೂ ಅವರು ಮಾತನಾಡಿದ್ದಾರೆ. ಇದು ಸಂವಿಧಾನ ಬಾಹಿರವಾದುದು. ಕೂಡಲೇ ರೆಡ್ಡಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.
ರಾಜ್ಯಪಾಲರನ್ನು ಭೇಟಿ ಮಾಡಿದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ಈ ಹಿಂದೆ ಸಚಿವ ರೆಡ್ಡಿಗಳ ವಿರುದ್ಧ ಕೆ.ಸಿ.ಕೊಂಡಯ್ಯ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೂರಕವಾದ ಮಾಹಿತಿ ನೀಡುವಂತೆ ರಾಜ್ಯಾಪಾಲರು ಸೂಚಿಸಿದ್ದ ಹಿನ್ನೆಯಲ್ಲಿ ಅವರನ್ನು ಭೇಟಿ ಮಾಡಿದ್ದೆವು ಎಂದರು.
ತನ್ನ ಮಾಲಕತ್ವದ ಓಎಂಸಿ ಕಂಪೆನಿಯಲ್ಲಿ 1998ರಿಂದ 2003ರವರೆಗೆ ಯಾವುದೇ ಆದಾಯವಿಲ್ಲ ಎಂದು ತೆರಿಗೆ ಪಾವತಿಸದೆ ಇದ್ದ ಜನಾರ್ದನ ರೆಡ್ಡಿ, ಕಳೆದ 7 ವರ್ಷಗಳಲ್ಲಿ 50 ಸಾವಿರ ಕೋಟಿ ರೂ.ಗಳ ಆಸ್ತಿವಂತರಾಗಿದ್ದಾರೆ. 2008ರಿಂದ ಇಂಡೋನೇಶ್ಯ ಮೂಲದ ಜಿಎಲ್‌ಎ ಟ್ರೇಡಿಂಗ್ ಕಂಪೆನಿಯಲ್ಲಿ ಜನಾರ್ದನ ರೆಡ್ಡಿ ಶೇ.41.8, ಕರುಣಾಕರ ರೆಡ್ಡಿ ಶೇ.3.9, ಶ್ರೀರಾಮುಲು ಶೇ.3.9, ಶಾಸಕ ಸೋಮಶೇಖರ ರೆಡ್ಡಿ ಶೇ.8, ರೆಡ್ಡಿ ಸಂಬಂಧಿಕರಾದ ಜಿ.ಲಕ್ಷ್ಮಿ ಅರುಣ ಶೇ.34.4 ಹಾಗೂ ಬಿ.ವಿ.ಶ್ರೀನಿವಾಸ ರೆಡ್ಡಿಗಳು ಶೇ.8ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ.
ಅಲ್ಲದೆ ಇದರಿಂದ ಸುಮಾರು 300 ಕೋ.ರೂ.ಗಳ ಆದಾಯ ಪಡೆಯುತ್ತಿದ್ದಾರೆ. ಹೀಗೆ ಲಾಭದಾಯಕ ಹುದ್ದೆಯಲ್ಲಿರುವ ರೆಡ್ಡಿ ಸಹೋದರರು ಸಚಿವರಾಗಿರುವುದು ಸಂವಿಧಾನ ಬಾಹಿರವಾದುದು. ಇದಲ್ಲದೆ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ರೆಡ್ಡಿಗಳು, ಅದಿರು ಸರಬರಾಜು ಮಾಡುವ ಲಾರಿಗಳಿಗೆ 1000 ರೂ. ತೆರಿಗೆ ವಿಧಿಸಬೇಕೆಂಬ ಸಚಿವ ಸಂಪುಟದ ನಿರ್ಧಾರವನ್ನು ಕೈಬಿಡುವಂತೆ ಮಾಡಿದ್ದಾರೆ. ತಮ್ಮ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಮಾಡಿದ್ದಾರೆ. ಈ ಎಲ್ಲ ಕಾರ್ಯಚಟುವಟಿಕೆಗಳು ಸಂವಿಧಾನ ವಿರೋಧಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿರುವುದಾಗಿ ಉಗ್ರಪ್ಪ ಹೇಳಿದರು.
Subscribe to:
Post Comments (Atom)
No comments:
Post a Comment