VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಯಡಿಯೂರಪ್ಪ ಸರ್ಕಾರ ಜಸ್ಟ್ ಪಾಸ್!

ಇಡೀ ದೇಶ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡಿದ್ದರೂ ಕರ್ನಾಟಕದ ಜನ, ‘ವಿಶ್ವಾಸ ದ್ರೋಹ’ಕ್ಕೆ ಒಳಗಾದ ಮನುಷ್ಯನ ಪರ ನಿಂತರು. ನಡುವೆ ನಡೆದ ಉಪಚುನಾವಣೆಗಳ ಕಥೆ, ಅದಕ್ಕೆ ಬಳಸಿದ ‘ಆಪರೇಷನ್ ಕಮಲ’ದಂಥ ಅಪ್ರಜಾಸತ್ತಾತ್ಮಕ ಕ್ರಮಗಳ ಇತಿಹಾಸ ಗೊತ್ತೇ ಇದೆ.

ಯಡಿಯೂರಪ್ಪನವರಿಗೂ ಈಗ ಅಚ್ಚರಿ ಅನಿಸುತ್ತಿರಬಹುದು, ತಮ್ಮ ಸರ್ಕಾರಕ್ಕೆ ಎರಡು ವರ್ಷಗಳು ಮುಗಿದು ಹೋದುವಲ್ಲ ಎಂದು. ಇನ್ನು ಮೂರು ವರ್ಷಗಳನ್ನು ಹೆಚ್ಚಿನ ಆತಂಕವಿಲ್ಲದೆ ಮುಗಿಸಬಹುದು ಎಂಬ ವಿಶ್ವಾಸವೂ ಅವರಲ್ಲಿ ಇರಬಹುದು.

ಎರಡು ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ, ಅದೂ ದಕ್ಷಿಣ ಭಾರತದಲ್ಲಿ, ಮೊದಲ ಬಿಜೆಪಿ ಸರ್ಕಾರ ಬರಬಹುದು ಎಂಬ ವಿಶ್ವಾಸ ಯಾರಲ್ಲಿಯೂ ಇರಲಿಲ್ಲ. ಅದು ಬಿಜೆಪಿ ಪರವಾಗಿ ಬಿದ್ದ ಮತವೇ ಅಥವಾ ಬಿಜೆಪಿಗೆ ಕೈಕೊಟ್ಟ ಜೆ.ಡಿ (ಎಸ್)ಗೆ ಪಾಠ ಕಲಿಸಲು ಬಿದ್ದ ಮತವೇ ಎಂದು ಕೇಳಿದರೆ ಎರಡನೇ ಕಾರಣವೇ ಗಟ್ಟಿಯಾಗಿ ನಿಲ್ಲುತ್ತದೆ. ವಿಧಾನಸಭೆ ಚುನಾವಣೆಯ ಗೆಲುವು ಸ್ಪಷ್ಟ ಜನಾದೇಶವಲ್ಲ ಎಂದುಕೊಂಡರೂ ನಂತರ ನಡೆದ ಅನೇಕ ಚುನಾವಣೆಗಳಲ್ಲಿನ ಜನಾದೇಶ ಬಿಜೆಪಿ ಪರವಾಗಿಯೇ ಇತ್ತು. ಲೋಕಸಭೆ ಚುನಾವಣೆಯಲ್ಲೂ ಜನರು ಯಡಿಯೂರಪ್ಪ ಅವರಿಗೇ ಮತ ಹಾಕಿದರು. ಇಡೀ ದೇಶ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡಿದ್ದರೂ ಕರ್ನಾಟಕದ ಜನ, ‘ವಿಶ್ವಾಸ ದ್ರೋಹ’ಕ್ಕೆ ಒಳಗಾದ ಮನುಷ್ಯನ ಪರ ನಿಂತರು. ನಡುವೆ ನಡೆದ ಉಪಚುನಾವಣೆಗಳ ಕಥೆ, ಅದಕ್ಕೆ ಬಳಸಿದ ‘ಆಪರೇಷನ್ ಕಮಲ’ದಂಥ ಅಪ್ರಜಾಸತ್ತಾತ್ಮಕ ಕ್ರಮಗಳ ಇತಿಹಾಸ ಗೊತ್ತೇ ಇದೆ.

ಮಧ್ಯದಲ್ಲಿ ಯಡಿಯೂರಪ್ಪ ಅವರು ತಮ್ಮ ಕುರ್ಚಿ ಕಳೆದುಕೊಂಡೇ ಬಿಡುತ್ತಾರೆ ಎನ್ನುವಂಥ ಭಿನ್ನಮತದ ಬಿರುಗಾಳಿ ರೆಡ್ಡಿ ಸೋದರರ ನೇತೃತ್ವದಲ್ಲಿ ಬೀಸಿದರೂ ಹೈಕಮಾಂಡ್ ರೂಪಿಸಿದ ಖಾಜಿನ್ಯಾಯದಿಂದ ಮುಖ್ಯಮಂತ್ರಿ ತಮ್ಮ ಅಧಿಕಾರ ಉಳಿಸಿಕೊಂಡರು. ಅಷ್ಟೇನು ಭರವಸೆ ಹುಟ್ಟಿಸದ, ಹೊಸ ಆಲೋಚನೆಗಳು ಇಲ್ಲದ ಅಧಿಕಾರ, ಭಿನ್ನಮತ, ಭ್ರಷ್ಟಾಚಾರ ಮುಂತಾದ ಉಣಾ ಅಂಶಗಳ ನಡುವೆಯೂ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಗೆಲುವು ಅದ್ವಿತೀಯವಾದುದು.

ಸತತವಾಗಿ ನಡೆದ ಚುನಾವಣೆಗಳಲ್ಲಿ ನಿರಂತರವಾಗಿ ಸಿಕ್ಕ ಗೆಲುವು ಯಡಿಯೂರಪ್ಪ ಬೀಗುವಂತೆ ಮಾಡಿದೆ. ವಿರೋಧ ಪಕ್ಷಗಳು ನಿರ್ವಿಣ್ಣವಾಗಿವೆ. ಯಡಿಯೂರಪ್ಪ ಅವರ ವಿರುದ್ಧ ತೊಡೆ ತಟ್ಟಿದ್ದ ರೆಡ್ಡಿ ಸೋದರರು, ‘ಆ ಕಡೆ ಕೋರ್ಟ್ ಕೇಸ್‌ಗಳು, ಈ ಕಡೆ ರಾಜ್ಯಪಾಲರ ನೋಟಿಸುಗಳ ಮಧ್ಯೆ ಅಧಿಕಾರ ಉಳಿದರೆ ಸಾಕು’ ಎಂದು ಮೆತ್ತಗಾಗಿದ್ದಾರೆ. ಯಡಿಯೂರಪ್ಪ ಅವರ ಕುರ್ಚಿಗೆ ಈಗ ಯಾವ ಧಕ್ಕೆಯೂ ಇಲ್ಲ. ಅವರು ಪಕ್ಷದ ಏಕಮೇವಾದ್ವೀತಿಯ ನಾಯಕ. ಅವರ ಬೆಂಬಲಕ್ಕೆ ಬಹುದೊಡ್ಡ ಸಮಾಜ ನಿಂತಿದೆ. ಯಾರಾದರೂ ತುಟಿ ಪಿಟಕ್ ಎಂದರೂ ‘ಬಾಯಿ ಮುಚ್ಚಿಕೊಂಡು ಇರು’ ಎಂದು ತಾಕೀತು ಮಾಡುವ ಮಠಾಧೀಶರು ಇದ್ದಾರೆ!

ಯಡಿಯೂರಪ್ಪನವರೇ ಹೇಳಿಕೊಳ್ಳುವ ಹಾಗೆ ಭಾಗ್ಯಲಕ್ಷ್ಮಿಯಂಥ ಕೆಲವು ಒಳ್ಳೆಯ ಯೋಜನೆಗಳನ್ನು ಈ ಸರ್ಕಾರ ರೂಪಿಸಿರಬಹುದು; ಬೆಂಗಳೂರಿನಲ್ಲಿ ಹಿಂದೆ ಕಂಡು ಕೇಳಿ ಅರಿಯದ ‘ಅಭಿವೃದ್ಧಿ’ಯೂ ಆಗಿರಬಹುದು. ಆದರೆ, ಈ ಸರ್ಕಾರ ಮಂಡಿಸಿದ ಬಜೆಟ್‌ಗಳನ್ನು ನೋಡಿದರೆ ಅದಕ್ಕೆ ಸಮಗ್ರ ಅಭಿವೃದ್ಧಿಯ ಒಂದು ದೃಷ್ಟಿಕೋನ ಇದೆ ಎಂದು ಅನಿಸುವುದಿಲ್ಲ.

ಬೊಕ್ಕಸದ ಹಣವನ್ನು ಎಲ್ಲರಿಗೂ ಒಂದಿಷ್ಟು ಹಂಚಿ ಬಿಟ್ಟರೆ ಜನ ಖುಷಿಯಾಗಬಹುದು ಎಂಬ ಭಾವನೆಯೇ ಅಲ್ಲಿ ಎದ್ದು ಕಾಣುತ್ತದೆ. ವೈಯಕ್ತಿಕ ಲಾಭದಾಸೆಯ ಇಂದಿನ ದಿನಗಳಲ್ಲಿ ಹೀಗೆ ಹಣ ಹಂಚುವುದನ್ನು ಜನ ಇಷ್ಟಪಟ್ಟರೂ ಪಡಬಹುದು.

ಆದರೆ, ಸರ್ಕಾರಕ್ಕೆ ಒಂದು ಹೊಣೆ ಎಂದು ಇರುವುದಿಲ್ಲವೇ? ಅದಕ್ಕೆ, ಜನರ ಸಣ್ಣಪುಟ್ಟ ಆಸೆಗಳು ಮುಖ್ಯವೇ ಅಥವಾ ಒಟ್ಟು ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ತೆಗೆದುಕೊಂಡು ಹೋಗಿ ಇಡೀ ರಾಷ್ಟ್ರ ಮೆಚ್ಚುವ ಹಾಗೆ ನಿಲ್ಲಿಸುವುದು ಮುಖ್ಯವೇ?
ಯಡಿಯೂರಪ್ಪನವರ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವರ ಅನುಮಾನದ ಸ್ವಭಾವ. ಅವರು ತಮ್ಮ ಎಡಗೈಯನ್ನೇ ನಂಬುವಂತೆ ಕಾಣವುದಿಲ್ಲ. ನಾಯಕನಾದವನು, ಒಂದು ತಂಡವನ್ನು ಮುನ್ನಡೆಸಬೇಕಾದವನು ತನ್ನ ಜತೆಗೆ ಇರುವವರನ್ನು ನಂಬಬೇಕಾಗುತ್ತದೆ; ಅವರಿಗೆ ಆಗಾಗ ಬೆನ್ನು ತಟ್ಟಿ ಮೆಚ್ಚುಗೆಯ ನೋಟ ಬೀರಬೇಕಾಗುತ್ತದೆ. ರಾಜ್ಯ ಸಂಪುಟದ ಯಾವ ಮಂತ್ರಿಯಾದರೂ ವರದಿಗಾರರನ್ನು ಕರೆದು ಇದುವರೆಗೆ ತನ್ನ ಖಾತೆಯಲ್ಲಿ ಇಂತಿಂಥ ಸಾಧನೆಯಾಗಿದೆ ಎಂದು ಹೇಳಿಕೊಂಡಿದ್ದಾನೆಯೇ? ಹೇಳಿ ಮುಖ್ಯಮಂತ್ರಿಯ ಕೆಂಗಣ್ಣಿಗೆ ಏಕೆ ಬೀಳುವುದು ಎಂದು ಅವರು ಹೆದರಿದರೆ ಹೇಗೆ? ಹಾಗೆಂದು ಅಶಿಸ್ತಿನಿಂದ ನಡೆದುಕೊಂಡ, ಭ್ರಷ್ಟಾತಿಭ್ರಷ್ಟ ಸಚಿವರಿಗೆ ಮುಖ್ಯಮಂತ್ರಿಯಾದವರು, ‘ಏನಯ್ಯ ಎಷ್ಟೊಂದು ಹಣ ತಿನ್ನುತ್ತಿ?’ ಎಂದು ಎಚ್ಚರಿಸಿದ್ದಾರೆಯೇ?

ಸೋಜಿಗ ಎಂದರೆ, ಈ ಸಂಪುಟದ ಕಾರ್ಯವೈಖರಿಯ ಪರಾಮರ್ಶೆಯೇ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯ ಉಸ್ತುವಾರಿಯ ಎಐಸಿಸಿ ಪ್ರತಿನಿಧಿ ಬಂದು ಈ ಕೆಲಸ ಮಾಡುತ್ತಿದ್ದರು. ಎಲ್ಲಿ ಮೇಡಂ ಮುಂದೆ ತಮ್ಮ ಬಗ್ಗೆ ಇಲ್ಲದ್ದನ್ನು, ಸಲ್ಲದ್ದನ್ನು ಹೇಳಿಯಾರು ಎಂದು ಸಚಿವರು ಶಾಲಾ ಮಕ್ಕಳ ಹಾಗೆ ತಮ್ಮ ಖಾತೆಯ ಸಾಧನೆಗಳನ್ನು ಪಟ್ಟಿ ಮಾಡಿಕೊಂಡು ಹೋಗಿ ವರದಿ ಒಪ್ಪಿಸುತ್ತಿದ್ದರು. ಈ ಕೆಲಸವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಏಕೆ ಮಾಡಲಿಲ್ಲ? ‘ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆದಿದೆ. ಈ ಸರ್ಕಾರವನ್ನು ಉಳಿಸಿಕೊಳ್ಳೋಣ, ಮಾದರಿಯಾಗಿ ಆಡಳಿತ ಕೊಡೋಣ’ ಎಂದು ಅವರು ಎಂದಾದರೂ ಹೇಳಿದ್ದಾರೆಯೇ? ಯಾರಿಗಾದರೂ ಕಿವಿ ಹಿಂಡಿದ್ದಾರೆಯೇ? ಎಲ್ಲಿ ಹೇಳುತ್ತಾರೆ? ರಾಷ್ಟ್ರಮಟ್ಟದ ಬಿಜೆಪಿಯಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ.

ಯಡಿಯೂರಪ್ಪ ಕೂಡ ದೇವೇಗೌಡರ ಹಾಗೆ 24 ಗಂಟೆ ರಾಜಕಾರಣಿ. ನೆಲಮಟ್ಟದ ಪುರಸಭೆಯ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿಯ ಗಾದಿಯ ವರೆಗೆ ಏರಿ ಬಂದವರು. ಜನರ ಕಷ್ಟ ಅವರಿಗೆ ಗೊತ್ತಿದೆ. ಅವರಿಗೆ ಏನು ಬೇಕು ಎಂಬುದೂ ಗೊತ್ತಿದೆ. ಆದರೆ, ಅದನ್ನು ಹೇಗೆ ಜಾರಿಗೆ ತರಬೇಕು ಎಂಬ ದೃಷ್ಟಾರನ ಕಣ್ಣು ಇಲ್ಲ. ಅವರಿಗೆ ಮಾರ್ಗದರ್ಶನ ಮಾಡುವವರೂ ಯಾರೂ ಇಲ್ಲ. ಮಾಡುವ ಧೈರ್ಯವೂ ಇಲ್ಲ.

ಯಡಿಯೂರಪ್ಪ ಅವರಿಗೆ ಸತತ ಧಾವಂತ, ಅತೃಪ್ತಿ. ಒಂದು ನಾಟಕ ನೋಡಿ, ಸಂಗೀತ ಕೇಳಿ ಅವರು ಹೊತ್ತು ಕಳೆದುದು ಯಾರಿಗೂ ಗೊತ್ತಿಲ್ಲ. ನಿರಂತರ ಪ್ರವಾಸ. ಒಂದೇ ದಿನ ಮೂರು ಜಿಲ್ಲೆಗೆ ಹೋಗಿ ಬರಲೂ ಅವರು ಸಿದ್ಧ. ‘ವಿಧಾನಸೌಧದಲ್ಲಿ ಕುಳಿತು ಇಂದು ಮುಖ್ಯಮಂತ್ರಿ ಬರೀ ಕಡತ ನೋಡುತ್ತಾರೆ, ಯಾರನ್ನೂ ನೋಡುವುದಿಲ್ಲ’ ಎಂಬ ಪ್ರಕಟಣೆ ಹೊರಬಿದ್ದುದು ನೆನಪಿಲ್ಲ. ಮುಖ್ಯಮಂತ್ರಿಯೇ ವಿಧಾನಸೌಧದಲ್ಲಿ ಕುಳಿತುಕೊಳ್ಳದೇ ಇದ್ದರೆ ಮಂತ್ರಿಗಳು ಏಕೆ ಕುಳಿತುಕೊಳ್ಳುತ್ತಾರೆ? ‘ಕುಳಿತು ನಾವು ನಿರ್ಧಾರ ಮಾಡುವುದು ಏನಿದೆ? ಎಲ್ಲವನ್ನೂ ಮುಖ್ಯಮಂತ್ರಿಗಳೇ ನೋಡಿಕೊಳ್ಳುತ್ತಾರಲ್ಲ?’ ಎಂದು ಅವರು ಕೈ ಚೆಲ್ಲಿ ಕುಳಿತುಕೊಂಡಿದ್ದಾರೆ. ವಿಧಾನಸೌಧವನ್ನು ಈ ಸರ್ಕಾರದ ಸಚಿವರಷ್ಟು ತಾತ್ಸಾರ ಮಾಡಿದ ಸಚಿವರು ಯಾವ ಸರ್ಕಾರದಲ್ಲಿಯೂ ಇರಲಿಲ್ಲ.

ಒಂದು ರಾಜ್ಯ ಸರ್ಕಾರದ ಆಡಳಿತವನ್ನು ಒಬ್ಬ ಮುಖ್ಯಮಂತ್ರಿ ಅಥವಾ ಅವರ ಮನೆಯ ಸದಸ್ಯರು ನೋಡಿಕೊಳ್ಳುವುದು ಒಳ್ಳೆಯದಲ್ಲ. ಯಾವುದೇ ಅಧಿಕಾರ ಇಷ್ಟು ವಿಶೃಂಖಲವಾಗಿರಬಾರದು. ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ‘ಯಾವ ಸಚಿವರೂ ವಿಧಾನಸೌಧದ ಕಡೆ ಮುಖವನ್ನೇ ಹಾಕದೇ ಇದ್ದರೆ ಆಡಳಿತ ನಡೆಸುವುದು ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾತು ಈ ಸರ್ಕಾರದಲ್ಲಿ ಮಾತ್ರ ಕೇಳಿಬಂತು.

ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದರು. ಭಿನ್ನಾಭಿಪ್ರಾಯವನ್ನು ಸಹಿಸುತ್ತಿದ್ದರು. ಹಾಗಾಗಿ ಅನೇಕ ನಾಯಕರು ಅಲ್ಲಿ ಬೆಳೆದು ಬಂದರು. ಯಡಿಯೂರಪ್ಪ ಬಿಟ್ಟರೆ ಅವರ ಸರ್ಕಾರದಲ್ಲಿ ನಾಯಕತ್ವದ ವರ್ಚಸ್ಸಿನ ಸಚಿವರು ಯಾರು ಇದ್ದಾರೆ? ಬರೀ ನೆರಳುಗಳು ಇದ್ದಾವೆ. ತಮ್ಮ ಖಾತೆಯನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದ ಶೋಭಾ ಕರಂದ್ಲಾಜೆಯವರನ್ನು ತೆಗೆದು ರೇಣುಕಾಚಾರ್ಯ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಯಡಿಯೂರಪ್ಪ ಯಾವ ಸಂದೇಶ ನೀಡಿದರು? ಬಂಗಾರಪ್ಪ ಅವರನ್ನು ಹಣಿಯಲು ಕರೆತಂದಿದ್ದ ಹಾಲಪ್ಪ ಪಕ್ಷಕ್ಕೆ ಕೊಟ್ಟುದು ಹಾಲಾಹಲವಲ್ಲದೆ ಮತ್ತೇನು?

ಇದೆಲ್ಲದರಿಂದ ಏನಾಗಿದೆ ಎಂದರೆ, ಏನು ಮಾಡಿದರೆ ಏನು ಎಂಬ ನಿರಾಶೆ, ಯಥಾಸ್ಥಿತಿವಾದ. ಹೇಗೂ ಸರ್ಕಾರ ನಡೆದಿದೆಯಲ್ಲ ಎಂಬ ನಿರುಮ್ಮಳತೆ ವಿಜೃಂಭಿಸುತ್ತಿದೆ. ಕೇವಲ ಎರಡೇ ವರ್ಷಗಳ ಆಡಳಿತದಲ್ಲಿಯೇ ಇಂಥ ನಿರುಮ್ಮಳತೆ, ಯಥಾಸ್ಥಿತಿವಾದ ಕಾಣಿಸಿಕೊಂಡರೆ ಇನ್ನೂ ಮೂರು ವರ್ಷಗಳಲ್ಲಿ ಸಚಿವರ ಮನಃಸ್ಥಿತಿ ಏನಾಗಬಹುದು? ಜಡತ್ವ ಬಂದು ಬಿಡುವುದಿಲ್ಲವೇ?

ಮುಖ್ಯಮಂತ್ರಿಯಾದವನು ಒಂದು ತಂಡ ಕಟ್ಟಿಕೊಂಡು ಹೊಸ, ಹೊಸ ಆಲೋಚನೆಗಳಿಗೆ, ಐಡಿಯಾಗಳಿಗೆ ಹಾತೊರೆದರೆ ಸಚಿವರಿಗೂ ಏನಾದರೂ ಮಾಡೋಣ ಎನಿಸಬಹುದು. ಈಗ ಆ ಮುತುವರ್ಜಿಯೇ ಬೇಡ ಎಂಬ ನಿರ್ಲಿಪ್ತತೆ ಬಂದಿದೆ. ನೌಕರಶಾಹಿಗೆ ಯಾವಾಗಲೂ ಜಡತ್ವ ಕಾಡುತ್ತಲೇ ಇರುತ್ತದೆ. ಅದು ಯಥಾಸ್ಥಿತಿವಾದದ ಪರವಾಗಿಯೇ ಇರುತ್ತದೆ.

ಬದಲಾವಣೆಯನ್ನು ಶಾಸಕಾಂಗವೇ ತರಬೇಕು, ಬಯಸಬೇಕು. ಅದು ಈಗ ಕಾಣುತ್ತಿಲ್ಲ. ಜತೆಗೆ ನೌಕರಶಾಹಿಯನ್ನು ಅಧೀರಗೊಳಿಸುವ ನಿರಂತರ ವರ್ಗಾವಣೆ ಒಂದು ಪಿಡುಗಾಗಿ, ಭ್ರಷ್ಟ ವ್ಯವಸ್ಥೆಯಾಗಿ ಪರಿವರ್ತನೆಯಾಗಿದೆ.

ಈಗಿನ ಸರ್ಕಾರದಲ್ಲಿ ನಡೆದಷ್ಟು ಭ್ರಷ್ಟಾಚಾರ ಹಿಂದೆ ಯಾವ ಸರ್ಕಾರದಲ್ಲಿಯೂ ನಡೆದಿರಲಿಲ್ಲ ಎಂದು ಬಿಜೆಪಿಯ ಕಾರ್ಯಕರ್ತರೇ ಮರುಗುತ್ತಾರೆ. ‘ಮರುಗಿ ಪ್ರಯೋಜನವಿಲ್ಲ; ನಾವೂ ಸ್ವಲ್ಪ ಕೈ ಹೊಲಸು ಮಾಡಿಕೊಳ್ಳೋಣ’ ಎಂದು ಅವರೂ ಭ್ರಷ್ಟ ಹಾದಿಯಲ್ಲಿ ನಡೆದರೆ ಅದು ಯಾರ ತಪ್ಪು?

ಯಡಿಯೂರಪ್ಪ ಸರ್ಕಾರ ಮಾಡುತ್ತಿರುವ ಇನ್ನೊಂದು ತಪ್ಪು ಪಕ್ಷದ ಹೊರಗಿನವರನ್ನು ಕರೆತಂದು ಮಣೆ ಹಾಕುತ್ತಿರುವುದು. ಸರ್ಕಾರ ರಚನೆ ಮಾಡಲು ಪೂರ್ಣ ಜನಾದೇಶವಿಲ್ಲದ ಕಾರಣ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಿದ್ದು, ಆದರೂ ಸರ್ಕಾರ ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ಹುನ್ನಾರ ನಡೆಸಿವೆ ಎಂದು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದನ್ನು ಸಮರ್ಥಿಸಬಹುದು. ಒಪ್ಪಿಕೊಳ್ಳಲೂಬಹುದು. ಆದರೆ, ಅದು ಒಂದು ನಿರಂತರ ಪ್ರಕ್ರಿಯೆ ಎನ್ನುವಂತೆ ವರ್ಷದುದ್ದಕ್ಕೂ ನಡೆದುಬಿಟ್ಟರೆ ಅದು ನಾಯಕತ್ವದ ದಿವಾಳಿತನ ಎನ್ನದೆ ವಿಧಿಯಿಲ್ಲ. ಉದ್ದಕ್ಕೂ ಹೊರಗಿನವರನ್ನು ಕರೆದುಕೊಂಡು ಬಂದು ಅವರಿಗೆ ಅಧಿಕಾರ ಕೊಡುತ್ತ ಹೋದರೆ ನಾಳೆ ಅವರು ಬೇರೆ ಕಡೆ ಅಧಿಕಾರ ಸಿಕ್ಕರೆ ಅತ್ತ ಹೋಗುವುದಿಲ್ಲ ಎಂಬ ಗ್ಯಾರಂಟಿಯೇನು? ಇಷ್ಟು ವರ್ಷ ಪಕ್ಷದಲ್ಲಿ ಎಂದಾದರೂ ಅಧಿಕಾರ ಸಿಕ್ಕೀತು ಎಂದು ದುಡಿದವರು ಬರೀ ಗೆಣಸು ಕೆರೆಯುತ್ತ
ಕೂಡ್ರಬೇಕೇ?

ಅಧಿಕಾರ ಎಂಬುದು ಒಂದು ಅವಕಾಶ, ಒಂದು ಸವಾಲು. ಯಡಿಯೂರಪ್ಪ ಅವರ ಸರ್ಕಾರ ಎದುರಿಸಿದ ದೊಡ್ಡ ಸವಾಲು, ಉತ್ತರ ಕರ್ನಾಟಕದ 12-14 ಜಿಲ್ಲೆಗಳಲ್ಲಿ ಸಾವಿರಾರು ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ನೆಲೆ ಕಳೆದುಕೊಂಡು ಒಂದು ವರ್ಷವಾದರೂ ಇನ್ನೂ ತಗಡಿನ ಟೆಂಟ್‌ಗಳಲ್ಲಿಯೇ ವಾಸವಾಗಿರುವುದು. ಅವರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿ ಒಬ್ಬ ಮಂತ್ರಿಯನ್ನು ಇದುವರೆಗೆ ‘ಸಮನ್ವಯ ಸಚಿವ’ ಎಂದು ಏಕೆ ನೇಮಿಸಲಿಲ್ಲ? ಅಲ್ಲಿನ ಜನರ ಕಷ್ಟ ಯಡಿಯೂರಪ್ಪನವರ ಎದೆಯ ಮೇಲಿನ ಬಂಡೆಕಲ್ಲಾಗಬೇಕಿತ್ತು. ಈ ಜನರ ಸಂಕಷ್ಟ ನಿವಾರಣೆ ಒಂದು ಅವಕಾಶ ಎಂದು ಅವರು ಭಾವಿಸಬೇಕಿತ್ತು.

ಸಾರ್ವಜನಿಕರಿಂದ, ಮಠಮಾನ್ಯಗಳಿಂದ ಬಂದ ದುಡ್ಡನ್ನಾದರೂ ಖರ್ಚು ಮಾಡಲು ಇದ್ದ ಅಡಚಣೆಗಳನ್ನು ನಿವಾರಿಸಬೇಕಿತ್ತು. ಆ ಜನರು ತಮ್ಮ ಕಷ್ಟ ನಿರಂತರ ಎಂದು ಅಂದುಕೊಳ್ಳಬಾರದು. ಅವರಿಗೆ ಬಾಯಿಯಿಲ್ಲ. ಬಾಯಿ ಮಾಡಲು ರಟ್ಟೆಯಲ್ಲಿ ಶಕ್ತಿಯೂ ಇಲ್ಲ.

ಎಚ್.ಡಿ.ಕುಮಾರಸ್ವಾಮಿ ಏಕೋ ಏನೋ ಈ ಸರ್ಕಾರದ ಸಚಿವರಿಗೆ ಒದೆಯಿರಿ ಎಂದಿದ್ದಾರೆ. ಅದು ಸದಭಿರುಚಿ ಅಲ್ಲದೇ ಇರಬಹುದು. ಆದರೆ, ಜನರೂ ಹಾಗೆ ಯೋಚಿಸುವ ಮೊದಲು ಯಡಿಯೂರಪ್ಪ ಎಚ್ಚೆತ್ತುಕೊಳ್ಳಬೇಕು. ಸಮೃದ್ಧ ಕರ್ನಾಟಕದ ಕನಸನ್ನು ಅವರು ಕಾಣಬೇಕು. ಯಡಿಯೂರಪ್ಪ ಕಳೆದ ಎರಡು ವರ್ಷಗಳಲ್ಲಿ ಗಳಿಸಿದ ಅಂಕಗಳು ಜಸ್ಟ್ ಪಾಸ್ ಆಗುವಷ್ಟು. ಅಷ್ಟೇ ಸಾಕೇ?

No comments: