VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಜಗನ್‌ಗೆ ಅಂಕುಶ ಹಾಕಲು ಚಿರುಗೆ ಕಾಂಗ್ರೆಸ್ ಗಾಳ?

ಪ್ರಜಾ ರಾಜ್ಯಂ ಪಾರ್ಟಿ ಮುಖ್ಯಸ್ಥ, ತೆಲುಗು ಚಿತ್ರನಟ ಮೆಗಾಸ್ಟಾರ್ ಚಿರಂಜೀವಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನದ ಮೇರೆಗೆ ಶನಿವಾರ ನವದೆಹಲಿಗೆ ಆಗಮಿಸಿದ್ದು, ಆಂಧ್ರಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಗಳಲ್ಲಿ ಮೈತ್ರಿಯ ಸಾಧ್ಯತೆಗಳು ದಟ್ಟವಾಗಿರುವಂತೆಯೇ, ಹೈಕಮಾಂಡ್ ಸೂಚನೆ ಧಿಕ್ಕರಿಸಿ ಆಂಧ್ರದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿರುವ ವೈಎಸ್ಆರ್ ಪುತ್ರ ವೈ.ಜಗನ್ ಮೋಹನ್ ರೆಡ್ಡಿಯ ಅಹಂಕಾರ ಮುರಿಯುವ ಉದ್ದೇಶವೂ ಇದೆ ಎಂಬ ಸಂಗತಿಯೂ ಕೇಳಿಬರತೊಡಗಿದೆ.

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಪಿಆರ್‌ಪಿ ಇತ್ತೀಚೆಗೆ ಪ್ರಕಟಿಸಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷವು ಮೈತ್ರಿಗಾಗಿ ಚಿರಂಜೀವಿಯನ್ನು ದೆಹಲಿಗೆ ಕರೆಸಿಕೊಂಡಿದ್ದು, ಅವರು ಕಾನೂನು ಸಚಿವ ವೀರಪ್ಪ ಮೊಯಿಲಿ, ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತಿತರ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಆ ಬಳಿಕ ಪಕ್ಷಾಧ್ಯಕ್ಷೆ ಸೋನಿಯಾರನ್ನು ಭೇಟಿಯಾಗಲಿದ್ದಾರೆ.

ಕಾಂಗ್ರೆಸ್‌ನ ಐವರು ರಾಜ್ಯಸಭಾ ಸದಸ್ಯರಾದ ಕೇಂದ್ರ ಸಚಿವ ಜೈರಾಮ್ ರಮೇಶ್, ಜೆ.ಡಿ.ಸೀಲಂ, ವಿ.ಹನುಮಂತ ರಾವ್, ಗಿರೀಶ್ ಸಾಂಘಿ ಮತ್ತು ನೆಡುರುಮಲ್ಲಿ ಜನಾರ್ದನ ರೆಡ್ಡಿ ಹಾಗೂ ಸಿಪಿಎಂನ ಪೆನುಬಲ್ಲಿ ಮಧು ಎಂಬವರ ಅವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರು ರಾಜ್ಯಸಭಾ ಸ್ಥಾನಗಳಿಗಾಗಿ ಆಂಧ್ರದಲ್ಲಿ ಜೂ.11ರಂದು ಚುನಾವಣೆ ನಡೆಯಲಿದೆ. ಅಸೆಂಬ್ಲಿಯಲ್ಲಿ 156 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಕನಿಷ್ಠ 3 ಸ್ಥಾನಗಳು ದೊರೆಯುತ್ತವೆ ಮತ್ತು 91 ಸದಸ್ಯರಿರುವ ತೆಲುಗು ದೇಶಂಗೆ 2 ಸ್ಥಾನಗಳು ದೊರೆಯಲಿವೆ. ಇದೀಗ ಪ್ರಜಾ ರಾಜ್ಯಂ ಬಳಿ 17 ಶಾಸಕರಿದ್ದು, ಅವರಲ್ಲಿ ಇಬ್ಬರು, ಚಿರಂಜೀವಿ ತೆಲಂಗಾಣ ಹೋರಾಟಕ್ಕೆ ಬೆಂಬಲ ನೀಡದೇ ಇರುವುದರಿಂದ ಬಂಡಾಯವೆದ್ದಿದ್ದಾರೆ. ರಾಜ್ಯಸಭೆಗೆ ಅವರ ಪಕ್ಷದ ಸದಸ್ಯರೊಬ್ಬರು ಆಯ್ಕೆಯಾಗಬೇಕಿದ್ದರೆ ಕನಿಷ್ಠ 42 ಶಾಸಕರ ಬೆಂಬಲ ಬೇಕಾಗುತ್ತದೆ.

ಇದೀಗ ಚಿರಂಜೀವಿಗೆ ಕಾಂಗ್ರೆಸ್ ಪಕ್ಷವು ಮಣೆ ಹಾಕಿರುವುದೇಕೆಂದರೆ, ತೆಲಂಗಾಣ ಹೋರಾಟದ ಪರವಾಗಿರುವ ಜಗನ್ ಬಣವು ಒಂದೊಮ್ಮೆ ತಮ್ಮ ಮಾತು ಕೇಳದೆ, ಪಕ್ಷವೇ ಒಡೆದುಹೋದರೆ ಎಂಬ ಆತಂಕದಿಂದ. ಆ ಸಂದರ್ಭದಲ್ಲಿ ರಾಜ್ಯ ಸರಕಾರದ ರಕ್ಷಣೆಯೊಂದಿಗೆ, ರಾಜ್ಯಸಭಾ ಚುನಾವಣೆಯಲ್ಲಿ ಜಯ ಗಳಿಸುವ ಇರಾದೆಯಿಂದ ಈ ತಂತ್ರ.

ವೈಎಸ್ಆರ್ ಸಾವಿನ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದವರ ಕುಟುಂಬಿಕರಿಗೆ ಸಾಂತ್ವನ ಹೇಳಲು ಹೊರಟಿದ್ದ ಜಗನ್ ಅವರ ವಾರಂಗಲ್ ಭೇಟಿಯನ್ನು ಮುಂದೂಡುವಂತೆ ಹೈಕಮಾಂಡ್ ಸೂಚಿಸಿತ್ತು. ಅವರನ್ನು ಶುಕ್ರವಾರ ಗೃಹಬಂಧನದಲ್ಲಿರಿಸಲಾಗಿದ್ದು, ಬಂಧನ ಪ್ರತಿಭಟಿಸಿ ತಿರುಪತಿಯಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಬಳಿಕ ಜಗನ್ ಬೆಂಬಲಿಗರ ಕಲ್ಲುತೂರಾಟ ನಿಯಂತ್ರಿಸಲು ಲಾಠಿಪ್ರಹಾರವೂ ನಡೆದಿತ್ತು.

No comments: