ನಾಗರಿಕ ಸ್ವಾತಂತ್ರ ಸಮಿತಿಯ ಆರೋಪ
ಹೈದರಾಬಾದ್,ಮೇ 19: ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ ಮತ್ತು ಆ ಬಳಿಕ ನಾಗರಿಕರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ ಘಟನೆಗಳು ಸಂಭವಿಸಿ ಮೂರು ವರ್ಷಗಳೇ ತುಂಬಿವೆ.
ಈ ಸಂದರ್ಭದಲ್ಲಿ ಮಕ್ಕಾ ಮಸೀದಿ ಸ್ಫೋಟ ಹಾಗೂ ಪೊಲೀಸ್ ಗೋಲಿಬಾರ್‌ಗಳಲ್ಲಿ ಸಂತ್ರಸ್ತರಾದ ವರೊಂದಿಗೆ ಏಕತೆಯನ್ನು ಪ್ರದರ್ಶಿಸುವುದಾಗಿ ಇಲ್ಲಿನ ನಾಗರಿಕ ಸ್ವಾತಂತ್ರ ಸಮಿತಿಯು ನಿರ್ಣಯವೊಂದನ್ನು ಅಂಗೀಕರಿಸಿದೆ.
2007ರ ಮೇ 18ರಂದು ಹೈದರಾಬಾದ್‌ನಲ್ಲಿ ಮೂರು ಭಯೋತ್ಪಾದಕ ಘಟನೆಗಳು ನಡೆದಿವೆ. ಮೊದಲನೆಯದಾಗಿ ಮಕ್ಕಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಐವರು ಪ್ರಾಣ ತೆತ್ತರು. ಎರಡನೆಯದಾಗಿ ಆ ನಂತರ ನಡೆದ ಪೊಲೀಸ್ ಗೋಲಿಬಾರಿಗೆ 9 ಮಂದಿ ಪ್ರಾಣ ಕಳೆದುಕೊಂಡರು. ಸ್ಫೋಟ ಘಟನೆಗೆ ಮುಸ್ಲಿಂ ಸಮುದಾಯವನ್ನು ದೂರಿ ಮಾಧ್ಯಮಗಳಲ್ಲಿ ಪೊಲೀಸರು ಹೇಳಿಕೆ ನೀಡಿದ್ದು ಮೂರನೆಯ ಭಯೋತ್ಪಾದಕ ಕೃತ್ಯ ಎಂದು ಸಮಿತಿಯು ಹೇಳಿದೆ.
ಮುಸ್ಲಿಮರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುವುದು ಹಾಗೂ ಮುಸ್ಲಿಮ್ ಸಮುದಾಯದ ನೈತಿಕತೆಯನ್ನು ಹತ್ತಿಕ್ಕುವುದು ಮತ್ತು ಅವರು ಸಮಾಜದಲ್ಲಿ ತಲೆಯೆತ್ತಿ ನಡೆಯದಂತೆ ಮಾಡುವ ದುರುದ್ದೇಶ ಇದಾಗಿದೆಯೆಂದು ಅದು ಹೇಳಿದೆ.
ದುರದೃಷ್ಟಕರವೆಂದರೆ ಕೆಲವು ‘ಹಿಂದುತ್ವವಾದಿ’ ಪೊಲೀಸ್ ಅಧಿಕಾರಿಗಳು ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದುದು. ಮುಸ್ಲಿಮರು ಅಂದು ಎಷ್ಟು ಭಯಭೀತರಾಗಿದ್ದರೆಂದರೆ ಪ್ರತಿಭಟಿಸುವುದರಲಿ, ಬಾಂಬ್ ಸ್ಫೋಟ ಮತ್ತು ಗೋಲಿಬಾರ್‌ಗೆ ಬಲಿಯಾದವರ ಅಂತ್ಯ ಸಂಸ್ಕಾರಗಳನ್ನು ಸಕಾಲದಲ್ಲಿ ಅವರಿಗೆ ನಿರ್ವಹಿಸಲಾಗಲಿಲ್ಲ.
ಆಗಿನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ತ್ರಿವೇದಿ ಮಕ್ಕಾ ಮಸೀದಿ ಸ್ಫೋಟದ ಹಿಂದೆ ಸಯೀದ್ ಬಿಲಾಲ್‌ನ ಕೈವಾಡವಿದೆಯೆಂದು ಆರೋಪಿಸಿದ್ದುದು ಶ್ರೀಸಾಮಾನ್ಯ ಮುಸ್ಲಿಮರು ಮೂಕರಾಗುವಂತೆ ಮಾಡಿತ್ತು ಮತ್ತು ಮುಸ್ಲಿಂ ನಾಯಕರು ಆಘಾತಗೊಂಡಿದ್ದರು.
ಆದರೆ ಪೊಲೀಸ್ ಸಿಬ್ಬಂದಿಗಳಲ್ಲಿರುವ ಹಿಂದುತ್ವ ವಾದಿಗಳನ್ನು ಬಳಸಿಕೊಂಡು, ಹಿಂದುತ್ವ ಭಯೋತ್ಪಾದಕರು ಮುಸ್ಲಿಮರ ವಿರುದ್ಧ ನಡೆಸಿದ ದೊಡ್ಡ ಕಾರಾಸ್ಥಾನ ಇದಾಗಿತ್ತೆಂದು ಸಮಿತಿ ಆರೋಪಿಸಿದೆ.
ಬಾಂಬ್ ಸ್ಫೋಟ ಮತ್ತು ಆ ಬಳಿಕ ಪೊಲೀಸ್ ಗೋಲಿಬಾರ್ ಘಟನೆಗಳು ನಡೆದ ತಕ್ಷಣವೇ ‘ನಾಗರಿಕ ಸ್ವಾತಂತ್ರ ಸಮಿತಿ’ಯು ತಯಾರಿಸಿದ ಸತ್ಯ ಶೋಧನಾ ವರದಿಯಲ್ಲಿ, ಇದೊಂದು ಹಿಂದುತ್ವವಾದಿಗಳ ದುಷ್ಕೃತ್ಯವೆಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಮಕ್ಕಾ ಮಸೀದಿ ಸ್ಫೋಟವು ಭಾರತದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿಯೇ ಅತ್ಯಂತ ವಿಭಿನ್ನವಾದುದಾಗಿದೆ. ಏಕೆಂದರೆ ಸ್ಫೋಟ ನಡೆದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿದ್ದ ಜನರ ಮೇಲೆಯೇ ಪೊಲೀಸರು ಗೋಲಿಬಾರ್ ನಡೆಸಿದ್ದರು.
ಸ್ಫೋಟಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು ಪೊಲೀಸ್ ಗೋಲಿಬಾರ್‌ಗೆ ಬಲಿಯಾದರು. ಮಕ್ಕಾ ಮಸೀದಿಯಲ್ಲಿ ಆ ದಿನ ಅಷ್ಟೊಂದು ಸಂಖ್ಯೆಯಲ್ಲಿ ಯಾಕೆ ಜಮಾಯಿಸಿದ್ದರೆಂದು ಮುಸ್ಲಿಮ್ ಯುವಕರನ್ನೇ ಪ್ರಶ್ನಿಸಿದ್ದ ಪೊಲೀಸರು ಅವರಿಗೆ ಕಿರುಕುಳ ನೀಡಿದ್ದರು.
ಈ ಎಲ್ಲಾ ಕಾರಣಗಳಿಗಾಗಿ ಮಕ್ಕಾ ಮಸೀದಿ ಸ್ಫೋಟವು ತೀರಾ ವಿಭಿನ್ನವಾದುದಾಗಿದೆ ಎಂದು ಸಮಿತಿ ಹೇಳಿದೆ.
ಹೈದರಾಬಾದ್ ಪೊಲೀಸರ ಪಕ್ಷಪಾತದಿಂದ ಕೂಡಿದ ತನಿಖೆ, ಸಿಬಿಐನ ಸೋಮಾರಿತನದ ಕಾರಣದಿಂದಾಗಿ ನಿಜವಾದ ಅಪರಾಧಿಗಳು ಈಗಲೂ ಆರಾಮವಾಗಿ ತಿರುಗಾಡುತ್ತಿದ್ದಾರೆ.
ಅಮಾಯಕರ ಮೇಲೆ ನಡೆದ ಪೊಲೀಸ್ ಗೋಲಿಬಾರ್ ಘಟನೆಯ ಬಗ್ಗೆ ತನಿಖೆಗಾಗಿ ಆಂಧ್ರ ಸರಕಾರವು ಭಾಸ್ಕರ್ ರಾಯ್ ಆಯೋಗವನ್ನು ರಚಿಸಿ ಮೂರು ವರ್ಷಗಳಾದರೂ, ವರದಿ ಇನ್ನೂ ಹೊರಬಿದ್ದಿಲ್ಲವೆಂದು ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ. ಸಮಿತಿಯ ಬೇಡಿಕೆಗಳು
1. ಮಕ್ಕಾ ಮಸೀದಿ ಸ್ಫೋಟವು ಹಿಂದುತ್ವವಾದಿ ಭಯೋತ್ಪಾದಕರ ಕೃತ್ಯವೆಂದು ಇದೀಗ ಸಾಬೀತಾಗಿರುವುದರಿಂದ, ಅಮಾಯಕ ಮುಸ್ಲಿಮರ ವಿರುದ್ಧ ದೋಷಾರೋಪ ಹೊರಿಸಿದ್ದಕ್ಕಾಗಿ ಮತ್ತು ಅವರ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಕ್ಕೆ ಸರಕಾರವು ಕ್ಷಮೆಯಾಚಿಸಬೇಕು.
2. ಮಕ್ಕಾ ಮಸೀದಿ ಸ್ಫೋಟ ಮತ್ತು ಆನಂತರ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಗಳ ನೈಜ ಅಪರಾಧಿಗಳ ಬಂಧನವಾಗಲಿ.
3. ಮುಸ್ಲಿಂ ವಿರೋಧಿ ಪೊಲೀಸ್ ಅಧಿಕಾರಿಗಳು ಹಾಗೂ ಹಿಂದುತ್ವವಾದಿ ಉಗ್ರರ ನಂಟಿನ ಬಗ್ಗೆ ಸಿಬಿಐ ತನಿಖೆಯಾಗಲಿ.
4. ಆರೆಸ್ಸೆಸ್ ಮತ್ತು ಸಂಘ ಪರಿವಾರದ ಚಟುವಟಿಕೆಗಳ ಬಗ್ಗೆ ಸೂಕ್ತವಾದ ನಿಗಾವಿರಿಸಬೇಕು.
5. ಹೈದರಾಬಾದ್‌ನಲ್ಲಿರುವ ಹಿಂದುತ್ವವಾದಿ ಉಗ್ರರ ಸ್ಲೀಪರ್ ಸೆಲ್‌ಗಳನ್ನು ತಕ್ಷಣವೇ ಬಯಲಿಗೆಳೆಯಬೇಕು.
6.ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದ ಹಾಗೂ ಕಿರುಕುಳ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
7. ಕಟ್ಟೆಚ್ಚರದ ಹೆಸರಿನಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಜನತೆಯನ್ನು ಪೊಲೀಸರು ಭಯಭೀತಗೊಳಿಸುವುದು ನಿಲ್ಲಬೇಕು.
8. ಪೊಲೀಸ್ ಗೋಲಿಬಾರ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಭಾಸ್ಕರ್‌ರಾವ್ ಆಯೋಗದ ವರದಿ ಶೀಘ್ರವೇ ಮಂಡನೆಯಾಗಲಿ.
Subscribe to:
Post Comments (Atom)
No comments:
Post a Comment