ತ್ರಿಕೋನ ಸರಣಿಯಲ್ಲಿ ದುರ್ಬಲ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೋಲಿನ ಆಘಾತಕ್ಕೊಳಗಾಗಿರುವ ಸುರೇಶ್ ರೈನಾ ನೇತೃತ್ವದ ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಹೊಸ ಲುಕ್‌ನಲ್ಲಿರುವ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸವನ್ನಿರಿಸಿಕೊಂಡಿದೆ.
ಸರಣಿಗಾಗಿ ಶ್ರೀಲಂಕಾವು ಸಹ ತನ್ನ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿದ್ದು, ತಿಲಕರತ್ನೆ ದಿಲ್‌ಶಾನ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಅದೇ ವೇಳೆ ಶುಕ್ರವಾರದ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರೀ ಮುಖಭಂಗಕ್ಕೊಳಗಾಗಿದ್ದ ಭಾರತ ತಂಡವು ಇಲ್ಲಿ ತಿರುಗಿಬೀಳುವ ವಿಶ್ವಾಸ ಹೊಂದಿದೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ದಿಟ್ಟ ಹೋರಾಟ ನಡೆಸಿದ್ದರೂ ಬೌಲರುಗಳು ಹಿನ್ನಡೆಗೆ ಕಾರಣವಾಗಿದ್ದರು. ಕರ್ನಾಟಕದ ವಿನಯ್ ಕುಮಾರ್ ಸೇರಿದಂತೆ ಚೊಚ್ಚಲ ಪಂದ್ಯವನ್ನಾಡಿದ ಉಮೇಶ್ ಯಾದವ್ ಮತ್ತು ಅಶೋಕ್ ದಿಂಡಾ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಸೋಲಿನ ನಂತರ ಪ್ರತಿಕ್ರಿಯಿಸಿದ ನಾಯಕ ರೈನಾ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಂಡುಬರಬೇಕಿದೆ ಎಂದು ಹೇಳಿದ್ದಾರೆ.
ಓಪನರುಗಳಾದ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್‌ರಿಂದಲೂ ನಿರೀಕ್ಷಿತ ಮಟ್ಟದ ಆರಂಭ ದೊರಕುತ್ತಿಲ್ಲ. ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಫಾರ್ಮ್‌ಗೆ ಮರಳಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಒಟ್ಟಿನಲ್ಲಿ ಭಾನುವಾರದ ಪಂದ್ಯದಲ್ಲಿ ರೈನಾ ನೇತೃತ್ವದ ಯುವ ಪಡೆಯಿಂದ ಲಂಕಾ ದಹನವಾಗಲಿದೆಯೇ ಎಂಬುದು ಕಾದುನೋಡಬೇಕಿದೆ.
ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ತಂಡ ಇಂತಿದೆ:
ಭಾರತ: ಸುರೇಶ್ ರೈನಾ (ನಾಯಕ), ವಿರಾಟ್ ಕೊಹ್ಲಿ (ಉಪನಾಯಕ), ಮುರಳಿ ವಿಜಯ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯೂಸುಫ್ ಪಠಾಣ್, ರವೀಂದ್ರ ಜಡೇಜಾ, ಆರ್. ಆಶ್ವಿನ್, ಉಮೇಶ್ ಯಾದವ್, ವಿನಯ್ ಕುಮಾರ್, ಅಶೋಕ್ ದಿಂಡಾ, ಪಂಕಜ್ ಸಿಂಗ್, ಅಮಿತ್ ಮಿಶ್ರಾ, ಪ್ರಗ್ಯಾನ್ ಓಜಾ ಮತ್ತು ನಮನ್ ಓಜಾ
ಶ್ರೀಲಂಕಾ: ತಿಲಕರತ್ನೆ ದಿಲ್‌ಶಾನ್ (ನಾಯಕ), ಆಂಗಲೋ ಮ್ಯಾಥ್ಯೂಸ್ (ಉಪನಾಯಕ), ಉಪುಲ್ ತರಂಗಾ, ತಿಲನ್ ಸಮರವೀರ, ದಿನೇಶ್ ಚಾಂದಿಮಾಲ್, ಲಹಿರು ತಿರಿಮನ್ನೆ, ಚಮರ ಕಪುಗೇಡರಾ, ಸೌರವ್ ರಣಧೀವ್, ನುವಾನ್ ಕುಲಶೇಖರ, ತಿಲಾನ್ ತುಷಾರಾ, ಅಜಂತಾ ಮೆಂಡೀಸ್, ಜೀವನ್ ಮೆಂಡೀಸ್, ದಿಲ್ಹಾರಾ ಫೆರ್ನಾಂಡೊ, ಚಮರ ಸಿಲ್ವಾ ಮತ್ತು ತಿಸಾರಾ ಪರೇರಾ.
Subscribe to:
Post Comments (Atom)
No comments:
Post a Comment