ಮಂಗಳೂರು, ಮೇ ೨೨: ವಿಮಾನ ದುರಂತದಲ್ಲಿ ಗಾಯಗೊಂಡ ಮತ್ತು ಮೃತದೇಹಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲು ಸ್ಥಳೀಯರಲ್ಲದೆ, ಅಗ್ನಿಶಾಮಕ ದಳ, ೧೦೮ ಆರೋಗ್ಯ ಕವಚ, ಸಂಜೀವಿನಿ ಸಹಿತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ೫೦ಕ್ಕೂ ಅಧಿಕ ಆಂಬುಲೆನ್ಸ್‌ಗಳ ಸಿಬ್ಬಂದಿಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದುದು ಕಂಡು ಬಂತು.
ವೆನ್ಲಾಕ್ ಸಹಿತ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗು ವಿವಿಧ ಸಂಘಟನೆಗಳ ಕಾರ್ಯಕರ್ತರು ಅನ್ನ, ನೀರು ಮುಟ್ಟದೆ, ಮಳೆಯನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದರು.
ಕೇರಳ ಗೃಹ ಸಚಿವರ ಭೇಟಿ
ಮಂಗಳೂರು, ಮೇ ೨೨: ವಿಮಾನ ದುರಂತದಲ್ಲಿ ಪವಾಡಸದೃಶ ಪಾರಾಗಿ ನಗರದ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇರಳ ಕಣ್ಣೂರಿನ ಮಾಯಿನ್ ಕುಟ್ಟಿ ಮತ್ತು ಕಾಸರಗೋಡು ಜಿಲ್ಲೆಯ ಉದುಮದ ಕೃಷ್ಣ ಅವರನ್ನು ಇಂದು ಕೇರಳ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ ವೆನ್ಲಾಕ್ ಮತ್ತಿತರ ಆಸ್ಪತ್ರೆಗಳ ಬಳಿ ಜಮಾಯಿಸಿರುವ ಮೃತ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ತನ್ಮಧ್ಯೆ ಪತ್ರಕರ್ತರ ಜತೆ ಮಾತನಾಡಿದ ಗೃಹ ಸಚಿವ ‘ಮೃತ ಕುಟುಂಬಸ್ಥರಿಗೆ ರಾಜ್ಯ ಸರಕಾರದಿಂದ ಪರಿಹಾರ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಲಾಗುವುದು ಮತ್ತು ಕೇರಳದ ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರ ಭರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ತಿಳಿಸಿದರು.
ಮಂಗಳೂರು-ಉಳ್ಳಾಲ ಮಸೀದಿಯಲ್ಲಿ ಮಯ್ಯಿತ್ ಸ್ನಾನ
ಮಂಗಳೂರು, ಮೇ ೨೨: ನಗರದ ಕೇಂದ್ರ ಜುಮ್ಮಾ ಮಸೀದಿ ಮತ್ತು ಉಳ್ಳಾಲ ದರ್ಗಾ-ಜುಮ್ಮಾ ಮಸೀದಿಯಲ್ಲಿ ಇಂದು ೪೦ಕ್ಕೂ ಅಧಿಕ ಮಯ್ಯಿತ್ ಸ್ನಾನ ಮಾಡಿಸಲಾಯಿತು ಎಂದು ಮಸೀದಿ ಮೂಲಗಳು ತಿಳಿಸಿವೆ.
ಭೀಕರ ದುರಂತದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವಿಶೇಷ ಅನುಮತಿಯೊಂದಿಗೆ ಸುಟ್ಟು ಕರಕಲಾದ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ. ಗುರುತು ಪತ್ತೆ ಹಚ್ಚಿದ ಮೃತದೇಹಗಳನ್ನು ವಾರಿಸುದಾರರು ಪಡೆದಿದ್ದು, ಮುಸ್ಲಿಮರು ಮಂಗಳೂರು ಮತ್ತು ಉಳ್ಳಾಲ ಜುಮ್ಮಾ ಮಸೀದಿಗೆ ಮಯ್ಯಿತ್‌ಗಳನ್ನು ಕೊಂಡೊಯ್ದು ಸ್ನಾನ ಮಾಡಿಸಿದರು.
‘ಬೆಳಗ್ಗಿನಿಂದಲೇ ಶಾಸಕ ಖಾದರ್ ಜತೆಗೂಡಿ ಬಜ್ಪೆ ಕೆಂಜಾರು, ವೆನ್ಲಾಕ್ ಮತ್ತು ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆಗೆ ತೆರಳಿದ ನಾವು ಉಳ್ಳಾಲದಲ್ಲಿ ಮಯ್ಯಿತ್ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟೆವು’ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಕಣಚೂರು ಮೋನು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ತಲ್ಲಣ
ಪೋಟೋ ಇದೆ) ಕಾಸರಗೋಡು, ಮೇ ೨೨: ಮಂಗಳೂರು ವಿಮಾನ ದುರಂತವು ಕೇರಳವನ್ನು ತಲ್ಲಣಗೊಳಿಸಿದ್ದು, ರಾಜ್ಯದ ೫೮ ಮಂದಿ ಮೃತಪಟ್ಟ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ದುರಂತದಲ್ಲಿ ಕಾಸರಗೋಡು ಜಿಲ್ಲೆಯ ೨೫ಕ್ಕೂ ಅಧಿಕ ಮಂದಿ ಸೇರಿದ್ದಾರೆ. ವಿಮಾನ ದುರಂತವು ರಾಜ್ಯದ ಜನತೆಯನ್ನು ಶೋಕತಪ್ತವನ್ನಾಗಿಸಿದೆ.
ದುರಂತಕ್ಕೀಡಾದ ವಿಮಾನದಲ್ಲಿ ಮಂಜೇಶ್ವರ, ಉಪ್ಪಳ, ಕಾಸರಗೋಡು, ಕಾಞಂಗಾಡ್, ಮಧೂರು ಹಾಗೂ ಕಣ್ಣೂರು ಜಿಲ್ಲೆಗಳ ಪ್ರಯಾಣಿಕರಿದ್ದರು. ಘಟನೆಯಿಂದ ಅಜನೂರಿನ ಕುಂಞ್ಞಬ್ದುಲ್ಲಾ, ಪಾಣತ್ತೂರಿನ ಪಿ.ಕೆ.ಕುಂಞ್ಞಬ್ದುಲ್ಲಾ, ಪೆರಿಯಾದ ರಾಜನ್, ಪರಪ್ಪದ ಪ್ರಭಾಕರನ್, ಉನ್ನಿ ಕೃಷ್ಣನ್, ರೋಸ್ಲಿ ಶಿಬು, ಮಕ್ಕಳಾದ ಗೋಡ್ವಿನ್ ಥೋಮಸ್(೧೦), ಗ್ಲೋರಿಯಾ ಥೋಮಸ್ (೧೩) ಎಂಬವರು ದುರಂತದಲ್ಲಿ ಮೃತಪಟ್ಟಿದ್ದು ದೃಢಪಟ್ಟಿದೆ. ಇತರ ಪ್ರಯಾಣಿಕರಾದ ಕಾಸರಗೋಡು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ, ಉದ್ಯಮಿ ತಳಂಗರೆಯ ಇಬ್ರಾಹೀಂ ಖಲೀಲ್(೪೫), ಆರಿಕ್ಕಾಡಿ ಕಡವತ್‌ನ ಮುಹಮ್ಮದ್ ರಾಫಿ (೨೨), ಮಂಜೇಶ್ವರ ಮಾಡದ ಅಬ್ದುಲ್ಲಾ (೫೫), ಪೊವ್ವಲ್ ಅಮ್ಮಂಗೋಡಿನ ಮುಹಮ್ಮದ್ ಶಾಫಿ (೩೫), ಉದುಮ ಪಡಿಞಾರಿನ ಮುಹಮ್ಮದ್ ಅಸ್ಲಂ (೩೦), ಕಾಞಂಗಾಡ್ ಕಮ್ಮಡತ್‌ನ ಕುಂಞ್ಞಬ್ದುಲ್ಲ, ಕಾಸರಗೋಡು ಕಡಪ್ಪುರದ ಸೋಮನ್, ವೊಗ್ರಾಲ್ ಕೊಪ್ಪಳದ ಹಾರಿಸ್, ವೊಗ್ರಾಲ್‌ನ ಸಬ್‌ಕತ್‌ರ ಪತ್ನಿ ಮೆಹ್‌ದಾನ್, ಅವರ ಏಳು ತಿಂಗಳ ಹಸುಳೆ ರಶಾದ್, ವಿದ್ಯಾನಗರದ ಅಶ್ರಫ್‌ರ ಪತ್ನಿ ನಝೀಮ, ಮುಲ್ಲಚ್ಚೇರಿಯ ಬಾಲಕೃಷ್ಣನ್, ಪೊಯಿನಾಚಿಯ ಚಾತುಕುಟ್ಟಿ ನಾಯರ್, ಪೆರುಂಬಳದ ಮುಹಮ್ಮದ್ ಹಕೀಂ (೩೨), ಬೇನೂರಿನ ಅಹ್ಮದ್ ಸಾದಾತ್, ಕಾಸರಗೋಡಿನ ನೌಶಾದ್, ಆರಿಕ್ಕಾಡಿಯ ಅಬ್ದುರ್ರಹ್ಮಾನ್‌ರ ಪತ್ನಿ ಮೈಮೂನಾ, ರಫಿಕ್ ಕೋಳಿಯಡ್ಕ, ಕಾಞಂಗಾಡನ್ ವಿಜೇಶ್, ನೀಲೇಶ್ವರದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಟಿಟಿಸಿ ಭಾಸ್ಕರನ್, ಅವರ ಪತ್ನಿ ಕೋಮಲ, ಉದುಮದ ಮಾಹಿನ್, ಮೇಲ್ಪರಂಬ ವಳ್ಳಿಯಾಡಿನ ಮುಹಮ್ಮದ್‌ರ ಪುತ್ರ ಹುಸೈನ್, ಉಪ್ಪಳ ಬಪ್ಪಾಯಿತೊಟ್ಟಿಯ ಅಬ್ದುಲ್ ಹಾಜಿಯವರ ಪುತ್ರ ಬಶೀರ್, ಬಶೀರ್‌ರ ಸಹೋದರ ಸಿದ್ದೀಕ್, ಉಪ್ಪಳ ಗೇಟ್ ಬಳಿಯ ಮಾಹಿನ್ ಹಾಜಿಯವರ ಪುತ್ರ ಅಬ್ದುಲ್ ಅಝೀಝ್, ಕುಂಡಡ್ಕದ ಮಾಹಿನ್, ಮಧೂರು ಬೀರನ್ ವೊಯ್ದೀನ್g ಪುತ್ರ ಸಮೀರ್, ನಸೀಮಾ ಮುಹಮ್ಮದ್ ಅಶ್ರಫ್, ಕಣ್ಣೂರಿನ ಸುಲೈಖಾ ಬಾನು, ಕಣ್ಣೂರಿನ ಅಬ್ದುಲ್ಲಾ, ಅಮ್ಮಂಗೋಡಿನ ಮುಹಮ್ಮದ್ ಶಾಫಿ, ಅಬೂಬಕರ್ ಸಿದ್ದೀಕ್ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ದುರಂತದಲ್ಲಿ ಮೃತಪಟ್ಟ ಇಬ್ರಾಹೀಂ ಖಲೀಲ್ ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ, ಸುನ್ನೀ ವೊಹಲ್ಲಾದ ಜಿಲ್ಲಾ ಕೋಶಾಧಿಕಾರಿ ಹಾಗೂ ಉದ್ಯಮಿಯಾಗಿದ್ದರು.
ಹಲವು ಕನಸುಗಳನ್ನು ಹೊತ್ತು ಊರಿನತ್ತ ಹೆಜ್ಜೆ ಹಾಕಿದ ಹಲವಾರು ಮಂದಿ ಈ ದುರಂತದಲ್ಲಿ ಸಿಲುಕಬೇಕಾಯಿತು. ತಮ್ಮ ಕುಟುಂಬದ ಸದಸ್ಯರ ಬರುವಿಕೆಗಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಹಲವಾರು ಮಂದಿ ಕುಟುಂಬ ಸದಸ್ಯರು ಈ ದುರಂತಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಬೇಕಾಯಿತು.
ರವಿವಾರ ನಡೆಯಲಿದ್ದ ತನ್ನ ಸಹೋದರಿ ರೆಹನಾಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಬೇನೂರಿನ ಅನ್ವರ್ ಸಾದಿಕ್(೨೭) ತನ್ನ ಸ್ನೇಹಿತ ಬೇನೂರಿನ ಅಬ್ದುಲ್ ಹಕೀಂರೊಂದಿಗೆ ಈ ನತದೃಷ್ಟ ವಿಮಾನವನ್ನೇರಿದ್ದರು. ವಿಮಾನ ಹತ್ತುವ ವೊದಲು ಮನೆಗೆ ದೂರವಾಣಿ ಕರೆ ಮಾಡಿದ್ದ ಇವರು, ಬೆಳಗ್ಗೆ ಊರಿಗೆ ತಲುಪುವುದಾಗಿ ತಿಳಿಸಿದ್ದರು. ಆದರೆ ಬೆಳಗ್ಗೆ ಕೇಳಿ ಬಂದ ವಿಮಾನ ದುರಂತದ ಸುದ್ದಿಯು ಇವರ ಕುಟುಂಬ ವರ್ಗವನ್ನು ತಲ್ಲಣಗೊಳಿಸಿದೆ.
ಉಪ್ಪಳದ ಬಪ್ಪಾಯಿತೊಟ್ಟಿಯ ಬಿ.ಕೆ.ಅಬ್ದುಲ್ ಹಾಜಿ-ಮರಿಯಮ್ಮ ದಂಪತಿ ಪುತ್ರರಾದ ಬಶೀರ್ (೪೦) ಹಾಗೂ ಸಿದ್ದೀಕ್ (೩೮) ಈ ದುರಂತಕ್ಕೀಡಾದ ವಿಮಾನದಲ್ಲಿದ್ದರು. ರವಿವಾರ ನಡೆಯಲಿದ್ದ ಸಹೋದರಿಯ ವಿವಾಹದಲ್ಲಿ ಭಾಗವಹಿಸಲು ಸಹೋದರರಿಬ್ಬರು ಊರಿನತ್ತ ಪ್ರಯಾಣ ಬೆಳೆಸಿದ್ದರು.
ತನ್ನ ತಂದೆ ನೆಲ್ಲಿಕುಂಜೆಯ ಸುಲೈಮಾನ್ ಹಾಜಿಯವರ ನಿಧನವಾರ್ತೆಯನ್ನು ತಿಳಿದು ಊರಿಗೆ ಪ್ರಯಾಣ ಬೆಳೆಸಿದ್ದ ಪುತ್ರ ಸಿದ್ದೀಕ್ ಕೂಡಾ ಇದೇ ನತದೃಷ್ಟ ವಿಮಾನದಲ್ಲಿದ್ದರು.
Subscribe to:
Post Comments (Atom)
No comments:
Post a Comment