
ಮಂಗಳೂರು, ಮೇ 28: ಬಜ್ಪೆ ವಿಮಾನ ದುರಂತದಲ್ಲಿ ಮಡಿದವರ ಪೈಕಿ ಕೆಲವು ಮಂದಿಯ ಮನೆಗೆ ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಗುರುವಾರ ಭೇಟಿ ನೀಡಿ ವಿಶೇಷ ದುವಾ ಮಾಡಿದರು.
ನಗರದ ಜಪ್ಪು, ಮಂಗಳಾದೇವಿ, ಉಳ್ಳಾಲ ಕೋಟೆಪುರ, ಕಣ್ಣೂರು, ಕಂಡತ್‌ಪಳ್ಳಿ ಹೀಗೆ ದುರಂತದಲ್ಲಿ ಮಡಿದ ಹಿಂದೂ ಮತ್ತು ಮುಸ್ಲಿಮರ ಮನೆಗಳಿಗೆ ಭೇಟಿ ನೀಡಿದರು.
ಈ ವೇಳೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಸಮದ್, ರಿಯಾಝ್, ಬಾಷಾ ತಂಳ್ ಹಾಜರಿದ್ದರು.
ಮೃತರ ಮನೆಗಳಿಗೆ ಜನಾರ್ದನ ಪೂಜಾರಿ, ಖುಸ್ರೋ ಖುರೇಶಿ ಭೇಟಿ ಮಾನವೀಯತೆ ಮುಖ್ಯ: ಖುಸ್ರೋ
ಮಂಗಳೂರಿನಲ್ಲಿ ಹಲವು ಬಾರಿ ಕೋಮುಗಲಭೆ ನಡೆದರೂ ಕೂಡ ಮೊನ್ನೆಯ ದುರ್ಘಟನೆಯ ಸಂದರ್ಭದಲ್ಲಿ ಎಲ್ಲರೂ ಜಾತಿಧರ್ಮವನ್ನು ಮರೆತು ಮಾನವೀಯತೆಯ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ಎಲ್ಲ ಧರ್ಮ ಜಾತಿಗಳಿಗಿಂತ ಮಾನವೀಯತೆ ಕೆಲಸ ಮಾಡಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಅಭಿಪ್ರಾಯಪಟ್ಟಿದ್ದಾರೆ.ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಮಂಗಳೂರು ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾವೆಲ್ಲ ಭಾರತೀಯ ಮಕ್ಕಳು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ತಾನು ಕೇವಲ ಅಲ್ಪಸಂಖ್ಯಾತರ ಮನೆಗಳಿಗೆ ಮಾತ್ರವಲ್ಲ ಎಲ್ಲಾ ಧರ್ಮದವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದರು.
--------------------------------------------------------------------------------
ಉಡುಪಿ, ಮೇ 28: ಬಜ್ಪೆ ವಿಮಾನ ದುರಂತದಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯವರ ಮನೆಗಳಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಶುಕ್ರವಾರ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಉಚ್ಚಿಲದ ಸಫ್ದರ್ ಅಲಿ, ಪಾಂಗಾಳ ಮಟ್ಟುವಿನ ನವೀನ್ ಕುಮಾರ್, ಶಂಕರಪುರದ ಫ್ಲೇವಿಯಾ ಲೋಬೊ, ಮಲ್ಲಾರಿನ ಝುಲೇಕಾ, ಉಡುಪಿ ವಳಕಾಡಿನ ಮುಹಮ್ಮದ್ ಝಿಯಾದ್, ಕೆಮ್ತೂರಿನ ಜಯಪ್ರಕಾಶ್ ದೇವಾಡಿಗ, ಕೊರಂಗ್ರಪಾಡಿಯ ಕಿಶೋರ್ ಕುಮಾರ್, ಕಿರಿಮಂಜೇಶ್ವರದ ಇಬ್ರಾಹೀಂ, ಗಂಗೊಳ್ಳಿಯ ಅಲ್ತಾಫ್‌ಅಹ್ಮದ್, ಶಾಂತಿ ಒಲಿವೇರಾ, ನೇಹಾರ ಮನೆಗಳಿಗೆ ತೆರಳಿದ ಜನಾರ್ದನ ಪೂಜಾರಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಂಸತ ವಿ.ಸಾಲ್ಯಾನ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎ.ಗಫೂರ್, ಮುಖಂಡ ರಾದ ಮೊಯ್ದಿನ್ ಬಾವಾ, ಅರುಣ್ ಕುವೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.
ಅದೇ ರೀತಿ ಖುಸ್ರೋ ಖುರೇಶಿ, ಕೆಮ್ತೂರಿನ ಜಯಪ್ರಕಾಶ್ ದೇವಾಡಿಗ, ಕೊರಂಗ್ರಪಾಡಿಯ ಕಿಶೋರ್, ಮರ್ಣೆಯ ಕೆವಿನ್, ವಳಕಾಡಿನ ಮುಹಮ್ಮದ್ ಝಿಯಾದ್, ಮಲ್ಪೆಯ ನವೀದ್‌ರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಖತೀಬ್ ರಶೀದ್, ವಕ್ಫ್ ಬೋರ್ಡ್‌ನ ಉಡುಪಿ ಜಿಲ್ಲಾ ಸಲಹಾ ಮಂಡಳಿಯ ಅಧ್ಯಕ್ಷ ಬುಡಾನ್ ಬಾಷಾ, ಖರಮತ್ ಅಲಿ, ಮುಹಮ್ಮದ್ ವೌಲ, ಇಲಾಖೆಯ ಅಧಿಕಾರಿ ಗಿರೀಶ್ ಉಪಸ್ಥಿತರಿದ್ದರು.
No comments:
Post a Comment