ಬಜ್ಪೆ ವಿಮಾನನಿಲ್ದಾಣವು ಕ್ಲಿಷ್ಟಕರವಾದುದಾದರೂ, ಖಂಡಿತವಾಗಿಯೂ ಅಸುರಕ್ಷಿತವಲ್ಲವೆಂದು ಪ್ರಭಾಕರ ಹೆಗ್ಡೆ ಹೇಳುತ್ತಾರೆ.1951ರ ಡಿಸೆಂಬರ್ 25ರಂದು ವಿಮಾನವನ್ನು ಪ್ರಪ್ರಥಮ ಬಾರಿಗೆ ಬಜ್ಪೆ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ದಿನವು ತನ್ನ ಪಾಲಿಗೆ ಅವಿಸ್ಮರಣೀಯವಾದುದು ಎಂದು ಪ್ರಭಾಕರ ಹೆಗ್ಡೆ ಹೇಳುತ್ತಾರೆ.
‘ಏರ್‌ಇಂಡಿಯಾ ದುರಂತಕ್ಕೆ ಪೈಲಟ್‌ನ ತಪ್ಪು ನಿರ್ಧಾರ ಕಾರಣವಾಗಿರಬಹುದು’
ಕಳೆದ ಶನಿವಾರ ಬಜ್ಪೆ ವಿಮಾನನಿಲ್ದಾಣದಲ್ಲಿ ಸಂಭವಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ದುರಂತಕ್ಕೆ ವಿಮಾನವು ಭೂಸ್ಪರ್ಶ ಮಾಡಿದ ಸಂದರ್ಭದಲ್ಲಿ ಪೈಲಟ್ ಕೈಗೊಂಡ ತಪ್ಪು ತೀರ್ಮಾನವು ಕಾರಣವಾಗಿರಬಹುದು ಅಥವಾ ಕ್ಯಾಪ್ಟನ್ ತನ್ನ ಸಹಪೈಲಟ್‌ಗೆ ವಿಮಾನವನ್ನು ಇಳಿಸಲು ಅವಕಾಶ ನೀಡಿರುವ ಸಾಧ್ಯತೆಯೂ ಇದೆಯೆಂದು ಪ್ರಭಾಕರ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆದರೆ ಪೈಲಟ್ ತನ್ನ ತಪ್ಪನ್ನು ಸರಿಪಡಿಸುವ ಮುನ್ನ ವಿಮಾನವು ಅವಘಡಕ್ಕೀಡಾಗಿರಬಹುದು. ಆದರೆ ಈಗ ಬ್ಲಾಕ್ ಬಾಕ್ಸ್ ದೊರೆತಿರುವುದರಿಂದ ದುರಂತದ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬಹುದೆಂಬ ಅನಿಸಿಕೆಯನ್ನು ಅವರು ವ್ಯಕ್ತಪಡಿಸುತ್ತಾರೆ.
ವಾಯುಸೇನೆಯ ನಿವೃತ್ತ ವಿಂಗ್‌ಕಮಾಂಡರ್ ಆಗಿರುವ ಪ್ರಭಾಕರ್ ಹೆಗ್ಡೆಗೆ ಈಗ 84 ವರ್ಷ. ಮಂಗಳೂರು ವಿಮಾನನಿಲ್ದಾಣಕ್ಕೆ ಪ್ರಪ್ರಥಮ ಹಾರಾಟ ನಡೆಸಿದ ಡಿಸಿ-3 ಡಕೋಟಾ ವಿಮಾನದಲ್ಲಿ ನೆಹರೂರನ್ನು ಪ್ರಭಾಕರ ಹೆಗ್ಡೆ ಕರೆತಂದಾಗ ಅವರು ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದರು. ಆಗ ಬಜ್ಪೆ ವಿಮಾನನಿಲ್ದಾಣ ವನ್ನು ಏರೋಡ್ರೋಮ್ ಎಂದು ಕರೆಯಲಾಗುತ್ತಿತ್ತು.
ಮೂಲತಃ ದಕ್ಷಿಣ ಕನ್ನಡಿಗರಾದ ಪ್ರಭಾಕರ ಹೆಗ್ಡೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈಗಲೂ ಆ ದಿನಗಳು ಚೆನ್ನಾಗಿ ನೆನಪಿವೆ. ‘‘ ನಾನು ಮೊತ್ತ ಮೊದಲ ಸಲ ಬಜ್ಪೆ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದಾಗ, ಆಲ್ಲಿ ರನ್ ವೇ ನಿರ್ಮಿಸಲು, ಬೆಟ್ಟವನ್ನು ಅಗೆಯುವ ಹಾಗೂ ಸಮತಟ್ಟು ಮಾಡುವ ಕೆಲಸ ನಡೆಯುತ್ತಿತ್ತು. ಆದರೆ ವಿಮಾನವು ಡಿಸಿ-3 ಸಣ್ಣಗಾತ್ರದ್ದಾಗಿ ದ್ದರಿಂದ, ನಾನು ಅದನ್ನು ಸುಲಭವಾಗಿ ಇಳಿಸಿದ್ದೆ ಎಂದು ಪ್ರಭಾಕರ ಹೆಗ್ಡೆ ಹೇಳು ತ್ತಾರೆ.
ವಿಮಾನವು ಭೂಸ್ಪರ್ಶ ಮಾಡಿದ ಬಳಿಕ ನೆಹರೂ ಹಸ್ತ ಲಾಘವ ಮಾಡಿ, ನಮ್ಮನ್ನು ಅಭಿನಂದಿಸಿದರೆಂದು ಅವರು ನೆನಪಿಸಿಕೊಳ್ಳುತ್ತಾರೆ.ಲೋಕಸಭಾಚುನಾವಣೆಯ ಪ್ರಚಾರಕ್ಕೆಂದು ನೆಹರೂ ಮಂಗಳೂರಿಗೆ ಭೇಟಿ ನೀಡಿದ್ದರು. ಭೂಸ್ಪರ್ಶದ ವೇಳೆ ನೆರವಾಗುವಂತಹ ಯಾವುದೇ ಉಪಕರಣ ಆ ಕಾಲದಲ್ಲಿ ಇರಲಿಲ್ಲ.
ವಿಂಗ್‌ಕಮಾಂಡರ್ ಪ್ರಭಾಕರ ಹೆಗ್ಡೆ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ತೆಗೆಯಲಾದ ಭಾವಚಿತ್ರವಿದು.ಬಜ್ಪೆ ವಿಮಾನನಿಲ್ದಾಣದ ಟೇಬಲ್‌ಟಾಪ್ (ಮೂರು ಕಡೆ ಕಂದಕಗಳಿಂದ ಆವೃತ) ರನ್‌ವೇಯಲ್ಲಿ ಇಳಿಯಲು ನನಗೆ ಕಷ್ಟವೇನೂ ಆಗಲಿಲ್ಲ. ಏಕೆಂದರೆ ಇಂತಹ ರನ್‌ವೇ ಹೊಂದಿರುವ ಕಾಶ್ಮೀರದಲ್ಲೂ ವಿಮಾನವನ್ನು ಹಾರಾಟ ಮಾಡಿದ ಅನುಭವ ತನಗಿದೆಯೆಂದು ಪ್ರಭಾಕರ ಹೆಗ್ಡೆ ಹೇಳುತ್ತಾರೆ.
ಬಜ್ಪೆ ವಿಮಾನನಿಲ್ದಾಣವು ಅಪಾಯಕಾರಿ ಅಥವಾ ಆಯೋಗ್ಯ ವಿಮಾನನಿಲ್ದಾಣವೆಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಈ ವಿಮಾನನಿಲ್ದಾಣವು ಕಳೆದ ಆರು ದಶಕಗಳಿಂದ ಯಾವುದೇ ಅವಘಡವಿಲ್ಲದೆ ಕಾರ್ಯನಿರ್ವಹಿಸಿದೆ. ಹಾಗಾಗಿ ಏಕಾಏಕಿಯಾಗಿ ಈ ವಿಮಾನನಿಲ್ದಾಣವು ಅಪಾಯಕಾರಿ ಯೆನಿಸಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಿಸುತ್ತಾರೆ. 24 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿರುವ ವಿಂಗ್‌ಕಮಾಂಡರ್ ಹೆಗ್ಡೆ 1968ರಲ್ಲಿ ನಿವೃತ್ತಿ ಹೊಂದಿದರು. 1947ರ ಭಾರತ-ಪಾಕ್ ಸಮರದಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದ ಪ್ರಭಾಕರ ಹೆಗ್ಡೆಯವರಿಗೆ ವೀರಚಕ್ರ ಪ್ರಶಸ್ತಿ ದೊರೆತಿದೆ.
No comments:
Post a Comment