‘ತಾಕತ್ತಿದ್ದರೆ ಚರ್ಚೆಗೆ ಬರಲಿ’
ಶಿವಮೊಗ್ಗ, ಮೇ 21: ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ ಅವರ ಮಾತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಇಂದಿಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಹಿಂದುಳಿದ ವರ್ಗಗಳ ಶ್ರೇಯೋಭಿವದ್ಧಿಗೆ ಯಾವ ಯಾವ ಸರಕಾರದ ಅವಧಿಯಲ್ಲಿ ಎಷ್ಟು ಕೆಲಸವಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ. ತಾಕತ್ತಿದ್ದರೆ ಅವರು ಬಹಿರಂಗ ಚರ್ಚೆಗೆ ಬರಲಿ ನೋಡೋಣ... ಎಂದು ಹರಿಹಾಯ್ದಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದು, ತೀವ್ರ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯರಿಗೆ ಸರಕಾರದ ವಿರುದ್ಧ ಟೀಕೆ ಮಾಡುವುದೇ ದೈನಂದಿನ ಕಾಯಕವಾಗಿದೆ.
ದಿನ ನಿತ್ಯ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುತ್ತಾರೆ. ಬಿಜೆಪಿ ಸರಕಾರದ ಜನಪ್ರಿಯತೆ, ಉತ್ತಮ ಕೆಲಸಗಳನ್ನ ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆಂದು ಹೇಳಿದರು. ಹಿಂದುಳಿದ ವರ್ಗಗಳ ಬಗ್ಗೆ ಯಡಿಯೂರಪ್ಪ-ಈಶ್ವರಪ್ಪಗೆ ಕಾಳಜಿಯಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾಗಾದರೆ ಕಾಗಿನೆಲೆ ಗುರುಪೀಠಕ್ಕೆ, ಬಂಜಾರ ಸೇರಿದಂತೆ ವಿವಿಧ ವರ್ಗಗಳ ಶ್ರೇಯೋಭಿವದ್ಧಿಗೆ ಬಿಜೆಪಿ ಸರಕಾರ ನೀಡಿದಷ್ಟು ಆದ್ಯತೆ ಮತ್ತಿನ್ಯಾವ ಸರಕಾರದ ಅವಧಿಯಲ್ಲಿ ಸಿಕ್ಕಿದೆ ? ಹೇಳಿ... ಎಂದು ಪ್ರಶ್ನಿಸಿದ ಅವರು, ಈ ವರ್ಗಗಳಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಉಪಮುಖ್ಯಮಂತ್ರಿ, ಸಚಿವರು, ಶಾಸಕರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಸಿರುವ ಸಿದ್ದರಾಮಯ್ಯ ಅವರು ಇದೇ ವರ್ಗಗಳಿಗೆ ಏನು ಮಾಡಿದ್ದಾರೆ ಎಂಬುವುದರ ಅಂಕಿ-ಅಂಶ ನೀಡಲಿ. ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಹಿಂದುಳಿದ ವರ್ಗದವರಿಗೆ ಸಂಧಾನದಲ್ಲಿ ಶೇ.27ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯನ್ನು ಕಸಿದು, ಮತಾಂತರ ಕ್ರಿಶ್ಚಿಯನ್-ಮುಸ್ಲಿಮರಿಗೆ ನೀಡುವ ಸನ್ನಾಹ ಮಾಡಲಾಗುತ್ತಿದೆ. ಇದನ್ನು ಸಿದ್ದರಾಮಯ್ಯ ವಿರೋಧಿಸದೆ ಮೌನವಾಗಿದ್ದಾರೆ.
ನಿಜವಾಲೂ ಅವರಿಗೆ ಕಾಳಜಿಯಿದ್ದರೆ ರಂಗನಾಥ ಮಿಶ್ರಾ ವರದಿಯನ್ನು ವಿರೋಧಿಸಲಿ ನೋಡೋಣ ಎಂದರು. ಸಿದ್ದರಾಮಯ್ಯರವರು ಸೋನಿಯಾಗಾಂಧಿ ಬಳಿ ತಾವೊಬ್ಬ ಹಿಂದುಳಿದ ವರ್ಗದ ಮುಖಂಡ ನೆಂದು ಹೇಳಿಕೊಂಡು, ವಿರೋಧ ಪಕ್ಷದ ಸ್ಥಾನ ವನ್ನು ಭದ್ರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.
Subscribe to:
Post Comments (Atom)
No comments:
Post a Comment