VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಮಾವೋ ಟೆರರ್: ಅಪ್ಪಿಕೊಂಡೇ ಪರಲೋಕ ಸೇರಿದ ಅವಳಿಗಳು!


ನಕ್ಸಲರ ರಕ್ತಪಿಪಾಸುತನಕ್ಕೆ ಬಲಿಯಾದವರು ಮುಗ್ಧ ಜನರು. ಸಾವಿನ ಸಂಖ್ಯೆಯು 115 ದಾಟಿರುವಂತೆಯೇ ಮನ ಕಲಕುವ ಕಥೆಗಳು, ಮಾವೋವಾದಿಗಳ ಹಿಂಸಾ ಪೀಡಿತ ಮನಸ್ಥಿತಿಯ ಕುರಿತ ಆಕ್ರೋಶದ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿವೆ. ಮನ ಕಲಕುವ ಗಾಥೆ ಈ ಅವಳಿ ಪುಟಾಣಿಗಳದ್ದು.

ಏಳು ವರ್ಷ ಪ್ರಾಯದ ಶಿರಿನ್ ಮತ್ತು ಶರ್ಮಿನ್ ಪರಸ್ಪರರನ್ನು ಹೋಲುವ ಅವಳಿಗಳು. ರಜಾದಿನಗಳನ್ನು ಜೊತೆಯಾಗಿ ಆನಂದಿಸಲೆಂದು ಮೊತ್ತ ಮೊದಲ ಬಾರಿಗೆ ರೈಲೇರಿದ್ದ ಈ ಎರಡನೇ ತರಗತಿಯ ಅವಳಿಗಳು, ಮುಂಬಯಿಯ ಎಲಿಫೆಂಟಾ ಗುಹೆ ನೋಡಲು ಹೊರಟಿದ್ದರು. ಮಾವೋವಾದಿಗಳು ಯಾರು ಅಥವಾ ತಾವು ರಜಾದಿನಗಳ ಆನಂದ ಅನುಭವಿಸಲು ಹೊರಟಿರುವ ರೈಲನ್ನೇಕೆ ಅವರು ಗುರಿಯಾಗಿಸಬೇಕು ಎಂಬುದೇನೂ ಅವರಿಗೆ ಅರಿವಿರಲಿಲ್ಲ.

ಎಲಿಫೆಂಟಾ ಕೇವ್ಸ್‌ಗೆ ಹೋಗಿ ಜೊತೆಯಾಗಿ ಫೋಟೋ ತೆಗೆಸಬೇಕು, ಅಲ್ಲಿ ಸಂತೋಷದಿಂದ ಸುತ್ತಾಡಬೇಕು, ಆನಂದ ಪಡೆಯಬೇಕು ಎಂಬೆಲ್ಲಾ ಕನಸುಗಳನ್ನು ಕಾಣುತ್ತಲೇ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ರೈಲಿನಲ್ಲಿ ಸುಖ ನಿದ್ರೆಗೆ ಜಾರಿದ್ದರು.

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಎಸ್-4 ಕೋಚ್‌ನಲ್ಲಿ ಸಿಆರ್‌ಪಿಎಫ್ ಯೋಧರು ಈ ಪುಟಾಣಿಗಳು ಪರಸ್ಪರ ತಬ್ಬಿಕೊಂಡೇ ಚಿರನಿದ್ರೆಗೆ ಜಾರಿದ್ದ ದೃಶ್ಯವನ್ನು ಕಂಡು ದುಃಖ ತಡೆದುಕೊಳ್ಳಲಾಗಲಿಲ್ಲ! ತಮ್ಮ ಕಂದಮ್ಮಗಳಿಗೆ ರಜಾದಿನದ ಆನಂದ ಒದಗಿಸಲೆಂದು ತಾವು ದುಡಿದ ಹಣವನ್ನೆಲ್ಲಾ ಒಟ್ಟುಗೂಡಿಸಿ, ಮಕ್ಕಳೊಂದಿಗೆ ಹೊರಟಿದ್ದ ಈ ಮಕ್ಕಳ ತಂದೆ-ತಾಯಿ ಸಯ್ಯದ್ ಜಾವೇದ್ ಆಲಂ (35) ಮತ್ತು ಸಬಿಹಾ (30) ಕೂಡ ಬದುಕುಳಿಯಲಿಲ್ಲ.

ಮೊದಲು ಅವರ ಶವಗಳು ಪತ್ತೆಯಾದ ಬಳಿಕ ರೈಲಿನ ಈ ಬಂಡಿಯನ್ನು ತುಂಡರಿಸಿ ಮತ್ತಷ್ಟು ಒಳಗೆ ನೋಡಿದಾಗ, ಪುಟಾಣಿ ಕೈಗಳು, ಹಾಲು ಗಲ್ಲ ಕಂಡಿತ್ತು ಈ ಸಿಆರ್‌ಪಿಎಫ್ ಸೈನಿಕರಿಗೆ. ತಕ್ಷಣವೇ ಹೊರತೆಗೆಯುವ ಕೆಲಸವನ್ನು ಚುರುಕುಗೊಳಿಸಿದರು, ಎಲ್ಲಾದರೂ ಈ ಮಕ್ಕಳನ್ನು ಉಳಿಸಬಹುದೇ ಎಂಬ ನಿರೀಕ್ಷೆಯಲ್ಲಿ. ಗ್ಯಾಸ್ ಕಟ್ಟರ್ ಹಿಡಿದು ಮುಂದುವರಿದಾಗ, ಕಬ್ಬಿಣದ ತಗಡು ತುಂಡರಿಸಿ ನೋಡಿದಾಗ, ದೃಶ್ಯ ನೋಡಿ ಆಘಾತಗೊಂಡರು. ಈ ಪುಟಾಣಿಗಳು ಪರಸ್ಪರರನ್ನು ಬಿಗಿದಪ್ಪಿಕೊಂಡಿದ್ದರು. ಒಬ್ಬಳ ತಲೆ ಮತ್ತೊಬ್ಬಳ ಎದೆಯಲ್ಲಿ ಹುದುಗಿತ್ತು. ಅವರಿಬ್ಬರೂ ನಿದ್ರಿಸುತ್ತಿದ್ದಂತೆಯೇ ತೋರುತ್ತಿತ್ತು, ಆದರೆ ಮುಖದಲ್ಲಿ ರಕ್ತ! ಈ ಮೃತದೇಹಗಳನ್ನು ಹೊರಗೆತೆಯಲು ಜವಾನರು ಈ ಮಕ್ಕಳನ್ನು ಬೇರ್ಪಡಿಸಲೇಬೇಕಿತ್ತು. ಎಂಥಾ ಹೃದಯ ವಿದ್ರಾವಕ ಕ್ಷಣಗಳಾಗಿತ್ತವು!

ನಕ್ಸಲ್ ಹಿಂಸಾ ವಾದಕ್ಕೆ, ರಕ್ತ ಪಿಪಾಸುತನಕ್ಕೆ ಧಿಕ್ಕಾರವಿರಲಿ!

No comments: