
ಮಂಗಳೂರು, ಮೇ ೨೭: ಸಂಘ ಪರಿವಾರದ ಮುಖವಾಣಿ ಪತ್ರಿಕೆಗಳಲ್ಲಿ ಮತ್ತು ಚಕ್ರವರ್ತಿ ಸೂಲಿಬೆಲೆಯಂತಹ ವ್ಯಕ್ತಿಗಳು ಮಹಾತ್ಮಾ ಗಾಂಧಿ, ನೆಹರೂ ಬಗ್ಗೆ ಕೆಟ್ಟದಾಗಿ ಬರೆಯುವ ಮತ್ತು ಅವಹೇಳನ ಮಾಡುವ ಮೂಲಕ ರಾಷ್ಟ್ರಕ್ಕೆ ಅಗೌರವ ಉಂಟು ಮಾಡುತ್ತಿದ್ದರೂ ಅಂಥವರಿಗೆ ವೇದಿಕೆ ಮೇಲೇರಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗುರುವಾರ ಪಕ್ಷದ ಕಚೇರಿಯಲ್ಲಿ ದೇಶದ ಪ್ರಥಮ ಪ್ರಧಾನಿ ದಿ.ಪಂಡಿತ್ ಜವಾಹರಲಾಲ್ ನೆಹರೂರ ೪೬ನೆ ಪುಣ್ಯ ತಿಥಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರಪಿತನನ್ನು ಅವಹೇಳನಕಾರಿಯಾಗಿ ಟೀಕಿಸುವ ಮೂಲಕ ರಾಷ್ಟ್ರಕ್ಕೆ ಅಗೌರವ ತೋರುವವರು ಗಣ್ಯರಾಗಿ ಮೆರೆಯಲು ಭಾರತದಲ್ಲಿ ಮಾತ್ರ ಸಾಧ್ಯ ಎಂದು ರೈ ವ್ಯಂಗ್ಯವಾಡಿದರು.
ಸೂಲಿಬೆಲೆಯಂತಹವರು ರಾಷ್ಟ್ರದ ಏಕತೆಯ ಮನಸ್ಸುಗಳನ್ನು ಒಡೆಯುವ ವಿಷ ಜಂತುಗಳು. ಮೌಢ್ಯಗಳ ಪ್ರತಿಪಾದಕರಾಗಿ, ಜಾಗೋ ಭಾರತ್ ಹೆಸರಿನಲ್ಲಿ ಹಣದ ದಂಧೆ ಮಾಡುವ ಇವರು ನೆಹರೂ, ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೆ ಅದು ಜನರ ಮೇಲೆ ಪರಿಣಾಮ ಬೀರಲಾರದು ಎಂದು ಪಕ್ಷದ ವಕ್ತಾರ ಎಂ.ಜಿ.ಹೆಗಡೆ ಹೇಳಿದರು.
ಸಮಾರಂಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಸದಾಶಿವ ಉಳ್ಳಾಲ್, ಪದ್ಮನಾಭ ನರಿಂಗಾನ, ಅಶ್ರಫ್, ನನ್ ಡಿಸೋಜ, ಅಬ್ಬಾಸ್ ಅಲಿ, ಎಲಿಝಬೆತ್ ಪಿರೇರಾ, ಅಪ್ಪಿ, ನಾಗವೇಣಿ, ಚಂದ್ರಹಾಸ ಕರ್ಕೇರಾ, ವಿಟ್ಲ ಖಾದರ್, ಕೇಶವ ಸನಿಲ್, ನಝೀರ್ ಬಜಾಲ್, ಡೆನ್ನಿಸ್ ಡಿಸಿಲ್ವ, ಸುರೇಶ್ ಪಾಂಡೇಶ್ವರ್, ಚಂದ್ರಶೇಖರ್ ಪೂಂಜ ಉಪಸ್ಥಿತರಿದ್ದರು. ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿದರು. ಅಶೋಕ್ ಡಿ.ಕೆ. ವಂದಿಸಿದರು.
No comments:
Post a Comment