ಲಂಡನ್, ಮೇ 23: ಇಲ್ಲಿನ ನೋರ್‌ಫೋಕ್‌ನಲ್ಲಿ ಭಾರತೀಯ ಉದ್ಯೋಗಿಯೊಬ್ಬನನ್ನು ಕೊಲೆಗೈದ ಮೂವರು ವ್ಯಕ್ತಿಗಳು ತಪ್ಪಿತಸ್ಥರೆಂದು ಕಂಡುಬಂದಿದ್ದು ಅವರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂವರು ವ್ಯಕ್ತಿಗಳು ಭಾರತೀಯ ಕಾರ್ಮಿಕನಾದ ಸರವಣಕುಮಾರ್ ಎಂಬಾತನನ್ನು ಹತ್ಯೆಗೈದು ಆತನಲ್ಲಿದ್ದ ಬ್ಲಾಕ್‌ಬೆರಿ ಫೋನನ್ನು ಕಸಿದು ಬಳಿಕ ಅದನ್ನು ಮಾರಾಟ ಮಾಡಿ ಕೋಳಿ ಭೋಜನ ನಡೆಸಿದ್ದರು.
24ರ ಹರೆಯದ ಸರವಣ ಕುಮಾರ್ ಸೆಲ್ಲಪ್ಪನ್ ಪೆಟ್ರೋಲ್ ಸ್ಟೇಶನ್‌ನಲ್ಲಿ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಡಿಸ್ ನಗರದಲ್ಲಿ ಆತನ ಬಳಿಗೆ ಬಂದ 18ರ ಹರೆಯದ ರೋಶನ್ ಸ್ಯಾಮೆಡೊವ್ ಹಾಗೂ ಇರಾನಿನವರಾದ 20ರ ಹರೆಯದ ಇರಾನಿನ ಜೆಗಿರ್ ಮತ್ತು 18ರ ಹರೆಯದ ಅವಾತ್ ಮುರದಿ ಆತನನ್ನು ಕೊಲೆಗೈದು ಮೊಬೈಲ್ ಫೋನ್ ಕಸಿದುಕೊಂಡಿದ್ದರು.
ಸೆಲ್ಲಪ್ಪನ್‌ನನ್ನು ಹಿಂಬಾಲಿಸಿದ್ದ ಈ ಮೂವರು ಆತನು ಮನೆಗೆ ತಲುಪುತ್ತಿದ್ದಂತೆ ಆತನನ್ನು ನೆಲಕ್ಕೆ ಕೆಡವಿ ಚೆನ್ನಾಗಿ ಥಳಿಸಿದ್ದರು. ಈ ಘಟನೆ ಕಳೆದ ಅಕ್ಟೋಬರ್‌ನಲ್ಲಿ ಸಂಭವಿಸಿತ್ತು. ಥಳಿತಕ್ಕೊಳಗಾದ ಸೆಲ್ಲಪ್ಪನ್‌ನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಮೆದುಳಿಗೆ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದನು. ಸೆಲ್ಲಪ್ಪನ್ ಭಾರತೀಯ ದಂಪತಿಯ ಏಕೈಕ ಪುತ್ರನಾಗಿದ್ದನು.
Subscribe to:
Post Comments (Atom)
No comments:
Post a Comment