ಚಿಂತಾಮಣಿ, ಮೇ 28: ಯುಕೆಜಿಗೆ ಡೊನೇಷನ್, ಸಮವಸ್ತ್ರ ಮತ್ತು ಲೇಖನ ಸಾಮಗ್ರಿಗಳಿಗಾಗಿ 3400 ರೂ. ಅಲ್ಲದೆ ಪ್ರತಿ ತಿಂಗಳು 250 ರೂ. ಫೀಸು.ಯುಕೆಜಿಗೆ ಇಷ್ಟು ಖರ್ಚಾದರೆ ಎಸೆಸೆಲ್ಸಿಗೆ ಖರ್ಚೆಷ್ಟು ಎಂದು ಪೋಷಕರು ಈಗ ಲೆಕ್ಕ ಹಾಕಬೇಕಾಗಿದೆ.ಇದು ಲೆಕ್ಕವಲ್ಲ ತಾಲೂಕಿನ ಖಾಸಗಿ ಶಾಲಾ ಕಾಲೇಜುಗಳ ವ್ಯಾಸಂಗ ದಂಧೆ ಎಂದು, ಹೆಸರು ಹೇಳಲು ಇಚ್ಚಿಸದ ಕೆಲ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಪರಿ.
ಚಿತ್ರದಲ್ಲಿ ಗಮನಿಸಿ, ಅಷ್ಟೊಂದು ಪುಸ್ತಕಗಳನ್ನು ಪೋಷಕರು ಶಾಲೆಯಲ್ಲಿ ದುಡ್ಡು ತೆತ್ತು ತೆಗೆದುಕೊಂಡು ಹೋಗುತ್ತಿರುವುದು 5ನೆ ತರಗತಿಗೊ, 10ನೆ ತರಗತಿಯ ವಿದ್ಯಾರ್ಥಿಗೋ ಅಲ್ಲ. ಯುಕೆಜಿಯ ವಿದ್ಯಾರ್ಥಿಗೆ ಎಂದರೆ ದಂಗಾಗುತ್ತೀರಿ.
ಸರಿಯಾಗಿ ನಡೆದಾಡಲೂ ಬಾರದ ಮುಗ್ಧ ಕಂದಮ್ಮಗಳಿಗೆ ಇಷ್ಟೊಂದು ಪುಸ್ತಕಗಳನ್ನು ಕೊಟ್ಟು, ಪಾಲಕರಿಂದ ಸಾವಿರಾರು ರೂ. ಕಿತ್ತು, ಟೈ-ಬೆಲ್ಟು, ಯೂನಿಫಾರಂ ಹಾಕಿಸಿ, ಪೋಷಕರಿಗೆ ಹೊರೆ ಮಾಡುವ ಖಾಸಗಿ ಶಾಲೆಗಳು ಇಂದು ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ತೆರೆದಿವೆ.
ಶಿಕ್ಷಣ ಎನ್ನುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳಲ್ಲೊಂದು, ಇಂತಹ ಶಿಕ್ಷಣ ಇಂದು ವ್ಯಾಪಾರೀಕರಣವಾಗಿ ಹೋಗಿದೆ. ಲಕ್ಷಾಂತರ ರೂ.ಗಳನ್ನು ತೆತ್ತು ಹಗಲಿರುಳು ಶ್ರಮಿಸಿ ವ್ಯಾಸಂಗ ಮಾಡಿ, ಡಿಗ್ರಿಗಳನ್ನು ಪಡೆಯುವ ಯುವ ಸಮೂಹವಿಂದು ನಿರುದ್ಯೋಗವೆಂಬ ಪೆಡಂಭೂತಕ್ಕೆ ಸಿಕ್ಕಿ ನಲುಗಿ ಹೋಗಿದೆ. ಶಿಕ್ಷಣ ತಜ್ಞರು, ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕಷ್ಟಪಟ್ಟು ಪದವಿ ಪಡೆದ ಪ್ರತಿಯೊಬ್ಬರಿಗೂ ಸೂಕ್ತ ಉದ್ಯೋಗಾವಕಾಶವನ್ನು ಕಲ್ಪಿಸುವ ಜವಾಬ್ದಾರಿ ಯನ್ನು ಹೊತ್ತರೆ ಮಾತ್ರ ಇಂದಿನ ಯುವಜನತೆ ನಿಶ್ಚಿಂತೆಯಿಂದ ಜೀವಿಸಬಹುದು. ಇಲ್ಲದಿದ್ದರೆ ಹೆಚ್ಚು ಶುಲ್ಕ ತೆತ್ತು ವ್ಯಾಸಂಗ ಮಾಡಿ ಪಡೆದ ಡಿಗ್ರಿ ಸರ್ಟಿಪಿಕೇಟ್‌ಗಳಿಗೆ ಫ್ರೇಂ ಹಾಕಿ ಗೋಡೆಗಳಿಗೆ ತೂಗಿ ಹಾಕುವಂತಾಗುತ್ತದೆ ಎನ್ನುವುದು ಕೆಲವರ ಮಾತು.
Subscribe to:
Post Comments (Atom)
No comments:
Post a Comment