ಮೈಸೂರು, ಮೇ 28: ರಾಜ್ಯ ವಿಧಾನಸಭೆ ಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಭವನೀಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದಾಗಿ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ನಗರಕ್ಕೆ ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭೆಯಲ್ಲಿ ಪ್ರಸ್ತುತ ಪಕ್ಷಗಳು ಹೊಂದಿರುವ ಬಲಾಬಲದಂತೆ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದ್ದು, ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ಕೂಡ ಇದೆ. ಆದರೆ ಈ ವಿಷಯದಲ್ಲಿ ವರಿಷ್ಠರು ಅಂತಿಮ ತೀರ್ಮಾನ ತೆಗೆದು ಕೊಳ್ಳಲಿದ್ದು, ಅದರಂತೆ ನಡೆದುಕೊಳ್ಳುವುದಾಗಿ ಅವರು ಹೇಳಿದರು.
ವಿಧಾನಮಂಡಲದ ಅಧಿವೇಶನ ಜೂ.28ರಿಂದ ಆರಂಭವಾಗಲಿದ್ದು, ಕೆಲವು ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ ಎಂದು ಅವರು ತಿಳಿಸಿದರು.
ಉಗ್ರರ ಜತೆಗಿನ ನಂಟಿನ ಶಂಕೆಯಿಂದ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯಿಂದ ಬಂಧಿತನಾಗಿರುವ ಭಟ್ಕಳ ಮೂಲದ ಅಬ್ದುಲ್ ಸಮದ್ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿರುವುದರಿಂದ ವಿಚಾರಣೆಗಾಗಿ ಆತನನ್ನು ರಾಜ್ಯದ ಪೊಲೀಸರ ವಶಕ್ಕೆ ಹಸ್ತಾಂತರಿಸುವಂತೆ ಕೋರಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
May 29, 2010
Subscribe to:
Post Comments (Atom)
No comments:
Post a Comment