ಪಣಜಿ,ಮೇ 24: ಮಡ್ಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮಾಲ್ಗೊಂಡಾ ಪಾಟೀಲ್ ಗೋವಾದಲ್ಲಿರುವ ಸನಾತನ ಸಂಸ್ಥೆಯ ಸಾಧುಗಳ ವಸತಿಗೃಹವಾದ 'ರಮಂತಿ ಆಶ್ರಮ'ದ ಸಂತ್ ಕಕ್ಷಯ್ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ಅಕ್ಟೋಬರ್16,2009ರಂದು ಮಡ್ಗಾಂವ್‌ನಲ್ಲಿ ನಡೆದ ಸ್ಫೋಟದಲ್ಲಿ ಮಾಲ್ಗೊಂಡಾ ಪಾಟೀಲ್ ಸಾವನ್ನಪ್ಪಿದ್ದ. ಈತ ರಮಂತಿ ಆಶ್ರಮದಲ್ಲಿ, ಸನಾತನ ಸಂಸ್ಥೆಯ ಸಂಸ್ಥಾಪಕ ಜಯಂತ್ ಬಾಲಾಜಿ ಅಠವಳೆಯ ಕೊಠಡಿಯ ಪಕ್ಕದಲ್ಲೇ ವಾಸಿಸುತ್ತಿದ್ದನೆಂದು ಎನ್‌ಐಎ ತಿಳಿಸಿದೆ.
ಸನಾತನ ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದ ಪಾಟೀಲ್ ವಿವಿಧ ಸ್ಥಳಗಳಲ್ಲಿ ಸಂಸ್ಥೆಯ ಸತ್ಸಂಗಗಳಲ್ಲಿ ಭಾಗವಹಿಸುತ್ತಿದ್ದ ಹಾಗೂ ಪೊಂಡಾದಲ್ಲಿರುವ ಸನಾತನ ಸಂಸ್ಥೆಯ 'ಅಭ್ಯಸಿಕಾ ಸಂತ್ ಕಕ್ಷಯ್' ಆಶ್ರಮದ ಕಟ್ಟಡದಲ್ಲಿ ವಾಸಿಸುತ್ತಿದ್ದನೆಂದು ಎನ್‌ಐಎ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಸನಾತನ ಸಂಸ್ಥೆಯು ನಡೆಸುತ್ತಿದ್ದ ಧರ್ಮ ಪ್ರಚಾರ್ ಸಭಾ ಟ್ರಸ್ಟ್‌ನ ಆಡಳಿತ ಟ್ರಸ್ಟಿಯಾಗಿದ್ದ ಪಾಟೀಲ್ ಮಡ್ಗಾಂವ್‌ನಲ್ಲಿ ಅ.16ರಂದು ಸ್ಫೋಟಕಗಳನ್ನು ಸ್ಕೂಟರ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಸಂಭವಿಸಿದ ಹಠಾತ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ.
ಅಕ್ಟೋಬರ್ 16ರಂದು ಗೋವಾದ ಐದು ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಲಾಗಿತ್ತೆಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಮಡ್ಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಡಿ.24, 2009ರಂದು ಗೋವಾ ಪೊಲೀಸರಿಂದ ತನ್ನ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆಯು, ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ಆರೋಪಿಗಳು ಸಹಿತ ಒಟ್ಟು 11 ಮಂದಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ. ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಹಾಗೂ ಉಳಿದ ಐವರು ತಲೆಮರೆಸಿಕೊಂಡಿದ್ದಾರೆ.
'' ಪ್ರಕರಣದ ಹಿಂದೆ ಇರುವ ಬಹುದೊಡ್ಡ ಸಂಚೊಂದನ್ನು ಬಯಲಿಗೆಳೆಯಲು ತಲೆಮರೆಸಿಕೊಂಡಿರುವ ಆರೋಪಿಗಳ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ'' ಎಂದು ಮೂರು ಸಾವಿರ ಪುಟಗಳ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಮಡ್ಗಾಂವ್ ಸ್ಫೋಟದ ಸಂಚು ಹೇಗೆ ರೂಪುಗೊಂಡಿತು ಹಾಗೂ ಮುಂಬೈ ಹಾಗೂ ಇಚಾಲ್‌ಕಾರಂಜಿ ಸೇರಿದಂತೆ ವಿವಿಧ ಸ್ಥಳಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳನ್ನು ಹೇಗೆ ಸಂಪಾದಿಸಲಾಯಿತು' ಎಂಬ ಬಗ್ಗೆಯೂ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.
ಐಇಡಿ ಸ್ಫೋಟಕಗಳನ್ನು ಜೋಡಿಸಲು ಗೂಗ್ಲ್ ಅಂತರ್ಜಾಲ ಶೋಧತಾಣದಿಂದ ವೆಬ್‌ಸೈಟ್‌ಗಳನ್ನು ಡೌನ್‌ಲೋಡ್ ಮಾಡಲಾಗಿತ್ತು ಎಂಬುದನ್ನು ಕೂಡಾ ಎನ್‌ಐಎ ಪತ್ತೆಹಚ್ಚಿದೆ. ಸ್ಫೋಟದ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಆಗಸ್ಟ್ 2009ರಂದು ಗೋವಾದ ತಾಲಾಯುಲಿಂ ಹಳ್ಳಿಯ ಬೆಟ್ಟದ ತುದಿಯಲ್ಲಿ ನಡೆಸಲಾಗಿತ್ತು. ಎರಡನೆ ಪ್ರಾಯೋಗಿಕ ಸ್ಫೋಟವನ್ನು ಮಹಾರಾಷ್ಟ್ರದ ಸಾಂಗ್ಲಿಯ ಜಾಥ್ ಎಂಬ ಗ್ರಾಮದಲ್ಲಿ ಸೆಪ್ಟಂಬರ್ 2009ರ ಕಡೆಯ ವಾರದಲ್ಲಿ ನಡೆಸಲಾಗಿತ್ತು. ಮಾಲ್ಗೊಂಡಾ ಈ ಗ್ರಾಮದ ನಿವಾಸಿಯಾಗಿದ್ದಾನೆ.
ಮಡ್ಗಾಂವ್ ಸ್ಫೋಟ ನಡೆದ ದಿನದಂದು ಆರೋಪಿಗಳು ಸ್ಫೋಟಕಗಳೊಂದಿಗೆ ಸಜ್ಜಿತರಾಗಿ ಎರಡು ಗುಂಪುಗಳಾಗಿ ಹೊರಬಿದ್ದಿದ್ದರು. ಆರೋಪಿಗಳಾದ ಮಾಲ್ಗೊಂಡ ಪಾಟೀಲ್ ಹಾಗೂ ಯೋಗೀಶ್ ನಾಕ್‌ಗೆ ಮಡ್ಗಾಂವ್‌ನಲ್ಲಿ ಬಾಂಬ್ ಹುದುಗಿಸುವ ಹೊಣೆ ನೀಡಲಾಗಿದ್ದರೆ, ವಿನಾಯಕ್ ಮತ್ತು ವಿನಯ್ ತಾಲೇಲ್‌ಕರ್‌ಗೆ ಮಡ್ಗಾಂವ್‌ನಿಂದ 20 ಕಿ.ಮೀ. ದೂರದ ಸನ್‌ಕೊಲೆಯಲ್ಲಿ ಬಾಂಬ್ ಹುದುಗಿಸುವ ಹೊಣೆ ಹೊತ್ತಿದ್ದ.
Subscribe to:
Post Comments (Atom)
No comments:
Post a Comment