
ಮಂಗಳೂರು, ಮೇ 24: ಸೈಯ್ಯದ್ ಫರ್ಹಾನ್ ಮೊನ್ನೆ...ಮೊನ್ನೆ...ಅದ್ಯಾವುದೋ ಸಣ್ಣ ಎಡವಟ್ಟು ಮಾಡಿ ಆಸ್ಪತ್ರೆಗೆ ಸೇರಿದ್ದ. ಮನೆಯಲ್ಲಿ ತಾಯಿ ಮರಿಯಮ್ಮ ಮಾತ್ರ. ಆಕೆ ಕಂಗಾಲಾಗಿ ಕುವೈತ್ ನಲ್ಲಿರುವ ಗಂಡ ಅಬ್ದುಲ್ ಮಜೀದ್ ಮತ್ತು ದುಬೈ ಯಲ್ಲಿರುವ ಹಿರಿಯ ಮಗ ಅಬ್ದುಲ್ ಝಿಬ್ರಾನ್ಗೆ ಫೋನ್ ಮೂಲಕ ಮಾಹಿತಿ ನೀಡಿದರು.
ವಿದೇಶದಲ್ಲಿ ಮಗ ಮತ್ತು ತಂದೆ ‘ಊರಿಗೆ ಯಾರು ಹೋಗುವುದು?’ ಎಂದು ಪರಸ್ಪರ ಚರ್ಚಿಸಿದರು. ನಾನೇ ಹೋಗುವೆ ಅಪ್ಪ... ಎಂದು ಮಗ ಹೇಳಿದ. ಹಾಗೇ ಶುಕ್ರವಾರ ರಾತ್ರಿ ಏರ್ ಇಂಡಿಯಾ ವಿಮಾನ ಏರಿದ್ದ. ಆದರೆ, ಆ ಮಗ ಮನೆಗೆ ತಲುಪಲೇ ಇಲ್ಲ. ತಮ್ಮನನ್ನು ನೋಡಲೂ ಆಗಲಿಲ್ಲ.
‘ಕಷ್ಟದಿಂದ ಸಾಕಿದ್ದೆ...’
‘ನಾನು ಇಬ್ಬರು ಮಕ್ಕಳನ್ನು ಕಷ್ಟದಿಂದ ಸಾಕಿದ್ದೆ. ಮೈಮುರಿದು ದುಡಿಯುತ್ತಿದ್ದ ನಾನು ಅವರಿಗೆ ವಿದ್ಯಾಭ್ಯಾಸ ನೀಡಿ ಒಳ್ಳೆಯ ಬದುಕನ್ನು ಕಾಣಲಿ ಎಂದು ಆಶಿಸಿದ್ದೆ. ಆದರೆ, ನಿರೀಕ್ಷಿಸಿ ದಂತೆ ಒಂದೂ ಆಗಲಿಲ್ಲ ಎಂದು ಅಬ್ದುಲ್ ಮಜೀದ್ ನೊಂದು ನುಡಿಯುತ್ತಾರೆ. ಅಬ್ದುಲ್ ಮಜೀದ್ ಆರಂಭದಲ್ಲಿ ಮೀನು ಗಾರಿಕೆ ಮಾಡುತ್ತಿದ್ದರು. ಅಲ್ಲಿ ಭಾರವಾದ ವಸ್ತುವೊಂದು ಮೈಮೇಲೆ ಬಿದ್ದು, ಎರಡ್ಮೂರು ವರ್ಷ ಕೆಲಸ ಮಾಡಲಾಗದೆ ಮನೆಯಲ್ಲೇ ಇದ್ದರು. ಅನಂತರ ಆರೇಳು ವರ್ಷದಿಂದ ಕುವೈತ್ನಲ್ಲಿ ಪುಟ್ಟ ಸಂಬಳದಿಂದ ಸಂಸಾರ ನಡೆಸುತ್ತಿದ್ದರು. ಅದೊಂದು ಹಂತಕ್ಕೆ ಬರುವ ಮುನ್ನವೇ ಹಿರಿಯ ಮಗನ ಮೃತ್ಯು ಹೆತ್ತವರನ್ನು ದು:ಖದ ಕಡಲಲ್ಲಿ ತೇಲಿಸಿದೆ.
ವಿಧಿ ಆತನನ್ನು ಕಾಣದ ಲೋಕಕ್ಕೆ ಕರೆದೊಯ್ಯಿತು.ಶನಿವಾರ ಬಜ್ಪೆ ವಿಮಾನ ಅಪಘಾತದಲ್ಲಿ ಮಡಿದ ಅಬ್ದುಲ್ ಝಿಬ್ರಾನ್(24)ನ ದುರಂತ ಕಥೆ ಇದು. ನಗರದ ಕುದ್ರೋಳಿಯ ಕಂಡತ್ಪಳ್ಳಿಯ ಅಬ್ದುಲ್ ಮಜೀದ್ ಮತ್ತು ಮರಿಯಮ್ಮ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗ ಅಬ್ದುಲ್ ಝಿಬ್ರಾನ್ ಕೇವಲ 6 ತಿಂಗಳ ಹಿಂದೆ ದುಬೈಗೆ ಹೋಗಿದ್ದ. ಮನೆಗೆ ಆಗಾಗ ಫೋನ್ ಕರೆ ಮಾಡಿ ತಾಯಿ ಮತ್ತು ತಮ್ಮನಲ್ಲಿ ಕ್ಷೇಮ ಸಮಾಚಾರ ತಿಳಿದು ಕೊಳ್ಳುತ್ತಿದ್ದ. ಅತ್ತ ಕುವೈತ್ನಲ್ಲಿ ಕೆಲಸ ಮಾಡುತ್ತಿದ್ದ ತಂದೆಯ ಜತೆಯೂ ಮಾತನಾಡುತ್ತಿದ್ದ.
No comments:
Post a Comment