
ಕಾಸರಗೋಡು, ಮೇ ೨೭: ನಗರದ ಹೊರವಲಯದ ನುಳ್ಳಿಪ್ಪಾಡಿಯಲ್ಲಿರುವ ಪ್ರಾರ್ಥನಾ ಮಂದಿರವೊಂದಕ್ಕೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಕಾಸರಗೋಡು ನಗರದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಘಟನೆ ಇಂದು ನಡೆಯಿತು. ದಿಢೀರನೆ ಭುಗಿಲೆದ್ದ ಹಿಂಸಾಚಾರ ಹಾಗೂ ಹರತಾಳದ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಘಟನೆ ವಿವರ: ನುಳ್ಳಿಪ್ಪಾಡಿಯ ಮುಹಿಯುದ್ದೀನ್ ಜುಮಾ ಮಸೀದಿಗೆ ಇಂದು ಮುಂಜಾನೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಿತಗೊಂಡ ತಂಡವೊಂದು ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ನಗರದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಲೆತ್ನಿಸಿತ್ತೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಕಿಡಗೇಡಿಗಳ ತಂಡ ಒಂದು ಹಳೆ ಬಸ್‌ನಿಲ್ದಾಣ ಬಳಿಯ ಅಂಗಡಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿತೆನ್ನಲಾಗಿದ್ದು, ಇದರಿಂದ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಕೂಡಲೇ ಮುಚ್ಚಿದ್ದರು. ಕಿಡಗೇಡಿಗಳು ಬಸ್‌ಗಳ ಮೇಲೂ ಕಲ್ಲುತೂರಾಟ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ನಡುವೆ ನಾಯಮ್ಮಾರ್ ಮೂಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಪ್ರಕಾಶ್‌ರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಸ್ ಹಾಗೂ ವಾಹನ ಸಂಚಾರ ಮೊಟಕು ಗೊಂಡಿದ್ದರಿಂದ ಬೆಳಗ್ಗೆ ನಗರಕ್ಕೆ ತಲುಪಿದ ನಾಗರಿಕರು ಪರದಾಡಬೇಕಾಯಿತು.ಘಟನೆಗೆ ಸಂಬಂಧಿಸಿದಂತೆ ೧೦ ಮಂದಿಯನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಕಾಸರಗೋಡಿಗೆ ಕರೆಸಲಾಗಿದೆ. ಮಸೀದಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಅಧ್ಯಕ್ಷ ಎಂ.ಖಾಸಿಂರವರ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಗುರುವಾರದಂದು ನಗರದ ಪ್ರಾರ್ಥನಾ ಮಂದಿರವೊಂದರ ಆವರಣ ಗೋಡೆಗೆ ಹಸಿರು ಬಣ್ಣ ಹಚ್ಚಿದ ಬಗ್ಗೆ ನಗರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದರಿಂದ ಜನರು ಸಮಸ್ಯೆಗೊಳಗಾಗಿದ್ದರು. ಇದರೊಂದಿಗೆ ಇಂದು ನಡೆದ ಘಟನೆಯು ಜನತೆಯಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ
No comments:
Post a Comment