VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಮೂರನೇ ಪ್ರಮುಖ ದುರಂತ

ಇವುಗಳಲ್ಲೇ ಅತ್ಯಂತ ಭೀಕರ ಎನಿಸಿಕೊಂಡ ಮೂರು ಅವಘಡಗಳಲ್ಲಿ ಸಹ ಇದು ಸ್ಥಾನ ಪಡೆದುಕೊಂಡಿದೆ.

ಕಳೆದ 48 ವರ್ಷಗಳಲ್ಲಿ (1962ರಿಂದೀಚೆಗೆ) ದೇಶದಲ್ಲಿ ಸಂಭವಿಸಿದ 11 ಪ್ರಮುಖ ವಿಮಾನ ಅಪಘಾತಗಳಲ್ಲಿ ಮಂಗಳೂರು ದುರಂತವೂ ಒಂದು. ಅಲ್ಲದೆ ಇವುಗಳಲ್ಲೇ ಅತ್ಯಂತ ಭೀಕರ ಎನಿಸಿಕೊಂಡ ಮೂರು ಅವಘಡಗಳಲ್ಲಿ ಸಹ ಇದು ಸ್ಥಾನ ಪಡೆದುಕೊಂಡಿದೆ.

1996ರಲ್ಲಿ ಹರ್ಯಾಣಾದ ಚರ್ಖಿ ದಾದ್ರಿ ಗ್ರಾಮದ ಬಳಿ ನಡೆದ ಎರಡು ವಿಮಾನಗಳ ಡಿಕ್ಕಿ 349 ಜನರನ್ನು ಬಲಿ ತೆಗೆದುಕೊಂಡಿತ್ತು. ಇದು ಈವರೆಗೆ ಅತ್ಯಧಿಕ ಜನರನ್ನು ಬಲಿ ತೆಗೆದುಕೊಂಡ ದೇಶದ ಹೀನಾಯ ವಿಮಾನ ದುರಂತ ಎನಿಸಿಕೊಂಡಿದೆ. ನವೆಂಬರ್ 12 ರಂದು ‘ಸೌದಿ ಅರೇಬಿಯನ್ ಏರ್‌ಲೈನ್ಸ್- 763’ ಮತ್ತು ‘ಕಜಕಸ್ತಾನ ಏರ್‌ಲೈನ್ಸ್ 1907’ ಆಗಸದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಹೊತ್ತಿ ಉರಿದಿದ್ದವು.

1978ರ ಜನವರಿ 1 ದೇಶದ ಜನರಿಗೆ ಹೊಸ ವರ್ಷಾಚರಣೆಯ ಸಂಭ್ರಮ ಹೊತ್ತು ತರಲಿಲ್ಲ. 213 ಜನರೊಂದಿಗೆ ದುಬೈಗೆ ಹೊರಟಿದ್ದ ‘ಏರ್ ಇಂಡಿಯಾ- 855’ ವರ್ಷಾರಂಭದ ಮೊದಲ ದಿನವೇ ಮುಂಬೈನ ಬಾಂದ್ರಾ ಕರಾವಳಿಯಿಂದ ಕೇವಲ 3 ಕಿ.ಮೀ ದೂರದಲ್ಲಿ ಅಪಘಾತಕ್ಕೀಡಾಗಿ ಎಲ್ಲರನ್ನೂ ಬಲಿ ತೆಗೆದುಕೊಂಡಿತ್ತು. ಈಗ 158 ಜನ ಕೊನೆಯುಸಿರೆಳೆದಿರುವ ಮಂಗಳೂರು ದುರಂತ ಮೂರನೆಯ ಭೀಬತ್ಸ ಘಟನೆ.


ಇವುಗಳನ್ನು ಹೊರತುಪಡಿಸಿ, ಏರ್ ಇಂಡಿಯಾ ವಿಮಾನವೊಂದು 1985ರಲ್ಲಿ ಭಯೋತ್ಪಾದಕರ ಅಮಾನವೀಯ ದಾಳಿಗೆ ತುತ್ತಾಗಿ ಸರ್ವನಾಶವಾಯಿತಾದರೂ ಅದು ನಡೆದದ್ದು ಐರಿಷ್ ಕರಾವಳಿಯಲ್ಲಿ. ಜೂನ್ 23ರಂದು ಮಾಂಟ್ರಿಯಲ್‌ನಿಂದ ಲಂಡನ್ ಮೂಲಕ ದೆಹಲಿಗೆ ಹೊರಟಿದ್ದ ವಿಮಾನ ‘ಕನಿಷ್ಕ’ವನ್ನು ಐರಿಶ್ ವಾಯು ಪ್ರದೇಶದಲ್ಲಿ ಭಯೋತ್ಪಾದಕರು ಸ್ಫೋಟಿಸಿದ್ದರು. ಈ ಅವಘಡದಿಂದ ಒಳಗಿದ್ದ ಎಲ್ಲ 329 ಮಂದಿಯೂ ಸುಟ್ಟು ಕರಕಲಾಗಿ ಹೋಗಿದ್ದರು.

ಹೀಗೆ ಸಾಕಷ್ಟು ಸಾವು ನೋವು ತಂದಿತ್ತ ಭಾರತೀಯ ವಿಮಾನ ದುರಂತಗಳ ವಿವರ ಇಲ್ಲಿದೆ:
ಜುಲೈ 7, 1962: ಸಿಡ್ನಿಯಿಂದ ಹೊರಟಿದ್ದ ‘ಅಲಿಟಾಲಿಯ ವಿಮಾನ- 771’ ಮುಂಬೈ ತಲುಪಲು ಕೆಲವೇ ನಿಮಿಷಗಳಿದ್ದಾಗ 84 ಕಿ.ಮೀ ದೂರದಲ್ಲಿದ್ದ ಬೆಟ್ಟಕ್ಕೆ ಅಪ್ಪಳಿಸಿ ಎಲ್ಲ 94 ಜನರೂ ಸಾವಿಗೀಡಾಗಿದ್ದರು.

ಜೂನ್ 21, 1982: ಕ್ವಾಲಾಲಂಪುರ- ಚೆನ್ನೈ ಮಾರ್ಗದ ‘ಏರ್ ಇಂಡಿಯಾ- 403’ ಮುಂಬೈನ ಸಹಾರಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡು 12 ಸಿಬ್ಬಂದಿಯಲ್ಲಿ ಇಬ್ಬರು ಹಾಗೂ 99 ಪ್ರಯಾಣಿಕರಲ್ಲಿ 15 ಮಂದಿ ಮೃತರಾಗಿದ್ದರು.

ಅಕ್ಟೋಬರ್ 19, 1988: ಮುಂಬೈನಿಂದ ಹೊರಟಿದ್ದ ‘ಇಂಡಿಯನ್ ಏರ್‌ಲೈನ್ಸ್- 113’ ಅಹಮದಾಬಾದ್ ನಿಲ್ದಾಣದಲ್ಲಿ ಇಳಿಯುವ ವೇಳೆ ಅವಘಡ ಸಂಭವಿಸಿ 130 ಮಂದಿ ಕೊನೆಯುಸಿರೆಳೆದಿದ್ದರು.

ಫೆಬ್ರುವರಿ 14, 1990: ಮುಂಬೈನಿಂದ ಬಂದ ‘ಇಂಡಿಯನ್ ಏರ್‌ಲೈನ್ಸ್- 605’ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಹಂತದಲ್ಲಿದ್ದಾಗ ನಡೆದ ದುರಂತದಲ್ಲಿ 92 ಮಂದಿ ಸಾವಿಗೀಡಾಗಿದ್ದರು. 54 ಅದೃಷ್ಟವಂತರು ಪಾರಾಗಿದ್ದರು.

ಆಗಸ್ಟ್ 16, 1991: ಕೋಲ್ಕತ್ತದಿಂದ ಇಂಫಾಲಕ್ಕೆ ಬರುತ್ತಿದ್ದ ‘ಇಂಡಿಯನ್ ಏರ್‌ಲೈನ್ಸ್- 257’ ವಿಮಾನ ಪ್ರಯಾಣ ಮುಗಿಯಲು ಕೇವಲ 40 ಕಿ.ಮೀ ಬಾಕಿ ಉಳಿದಿದ್ದಾಗ ಬೆಟ್ಟಕ್ಕೆ ಅಪ್ಪಳಿಸಿ ಎಲ್ಲ 69 ಮಂದಿಯನ್ನೂ ಬಲಿ ತೆಗೆದುಕೊಂಡಿತ್ತು.

ಏಪ್ರಿಲ್ 26, 1993: ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ‘ಇಂಡಿಯನ್ ಏರ್‌ಲೈನ್ಸ್- 491’ ಔರಂಗಾಬಾದ್ ನಿಲ್ದಾಣದಲ್ಲಿ ಮೇಲಕ್ಕೆ ಹಾರುವ ಸಿದ್ಧತೆಯಲ್ಲಿದ್ದಾಗ ಟ್ರಕ್‌ಗೆ ಡಿಕ್ಕಿ ಹೊಡೆದು 63 ಮಂದಿ ಸತ್ತಿದ್ದರು. 55 ಜನ ಬದುಕುಳಿದಿದ್ದರು.

ಜುಲೈ 17, 2000: ‘ಅಲಯನ್ಸ್ ಏರ್ ಸಿ.ಡಿ 7412’ ಪಟ್ನಾ ನಿಲ್ದಾಣದಲ್ಲಿ ನೆಲಕ್ಕೆ ಅಪ್ಪಳಿಸಿ 60 ಜನರ ಪ್ರಾಣ ಕಳೆದಿತ್ತು.

ಸೆಪ್ಟೆಂಬರ್ 4, 2009: ಮುಂಬೈ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡು 21 ಮಂದಿ ಗಾಯಗೊಂಡಿದ್ದರು.

No comments: