ಮಂಗಳೂರು ವಿಮಾನ ದುರಂತಕ್ಕೆ ಕಾರಣವೇನು?
ಮಂಗಳೂರು, ಮೇ 22 : ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಬರಬೇಕಾಗಿದೆ. ಸದ್ಯಕ್ಕೆ ವಿಮಾನದಲ್ಲಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕೆಲಸ ಭರದಿಂದ ಸಾಗಿದ್ದು ಬ್ಲಾಕ್ ಬಾಕ್ಸ್ ದೊರೆತ ನಂತರ ನಿಖರವಾದ ಮಾಹಿತಿ ಹೊರೆಯಲಿದೆ.
ಈವರೆಗೆ ತಿಳಿದಿರುವ ಮಾಹಿತಿಯ ಪ್ರಕಾರ, ಅತೀ ವೇಗದಲ್ಲಿ ರನ್ ವೇ ಸ್ಪರ್ಷಿಸಿದ ವಿಮಾನ ಪುಟ್ಟ ರನ್ ವೇ ದಾಟಿ ಮುಂದೆ ಜಿಗಿದಿದೆ. ಇದಕ್ಕೆ ಬ್ರೇಕ್ ಫೇಲ್ ಆಗಿರಬಹುದು ಎಂದೂ ಹೇಳಲಾಗುತ್ತಿದೆ. ಈ ರನ್ ವೇಯಲ್ಲಿ ಅತಿ ಕಡಿಮೆ ವೇಗದಲ್ಲಿ ಲ್ಯಾಂಡ್ ಆಗಬೇಕು ಎಂಬುದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಅನಿಸಿಕೆ. ರನ್ ವೇ ಉದ್ದವನ್ನು ಅಳೆಯಲು ಪೈಲಟ್ ವಿಫಲವಾಗಿ ನಿಯಂತ್ರಣ ಮಾಡಲಾಗದಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ದುರಂತ ಸಂಭವಿಸಿದ್ದು ಬೆಳಗಿನ ಜಾವದಲ್ಲಿ. ಮೋಡ ಮುಸುಕಿದ ವಾತಾವರಣವಿದ್ದುದೂ ದುರಂತಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ. ಕೆಲ ಪ್ರತ್ಯಕ್ಷ ದರ್ಶಿಗಳ ಪ್ರಕಾರ ವಿಮಾನದ ಟೈರ್ ಒಡೆದದ್ದರಿಂದ ನಿಯಂತ್ರಿಸಲು ಪೈಲಟ್ ಗೆ ಆಗಿಲ್ಲ. ಪೈಲಟ್ ಮತ್ತೆ ಟೈಕಾಫ್ ಮಾಡಲು ಪ್ರಯತ್ನಿದ್ದಾರಾದರೂ ಅದು ಸಾಧ್ಯವಾಗದೆ ರನ್ ವೇ ಮುಂದಿನ ಗಿಡಗಳಿದ್ದ ನೆಲಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ. ದುರಂತದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕಿದ್ದರೆ ಬ್ಲಾಕ್ ಬಾಕ್ಸ್ ದೊರೆಯುವವರೆಗೆ ಕಾಯಬೇಕು.
ತನಿಖೆಗೆ ಆದೇಶ : ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ಮಂಗಳೂರು ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.
ಮಂಗಳೂರು ಭೀಕರ ವಿಮಾನ ಅಪಘಾತ 160 ಸಾವು
ಮಂಗಳೂರು, ಮೇ.22: ದುಬೈನಿಂದ ಮಂಗಳೂರಿಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ಅಪಘಾತಕ್ಕೀಡಾಗಿ 160 ಮಂದಿ ಸಾವಪ್ಪಿದ ದಾರುಣ ಘಟನೆ ಶನಿವಾರ(ಮೇ.22) ಮುಂಜಾನೆ 6.30ರ ಸಮಯದಲ್ಲಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೋಯಿಂಗ್ 737ವಿಮಾನ 4 ಹಸುಗೂಸುಗಳು ಸೇರಿದಂತೆ ಒಟ್ಟು 165 ಮಂದಿ ಪ್ರಯಾಣಿಕರಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇನಲ್ಲಿ ವಿಮಾನ ಅಪಘಾತಕ್ಕೀಡಾಗಿಯಿತು.
ವಿಮಾನದಲ್ಲಿದ್ದ 163 ಮಂದಿ ಪ್ರಯಾಣಿಕರೊಂದಿಗೆ ಪೈಲಟ್ ಸೇರಿದಂತೆ ಆರು ಮಂದಿ ವಿಮಾನ ಸಿಬ್ಬಂದಿ ಸಾವಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ ಸೌಲಭ್ಯಗಳು ಹೇಳಿಕೊಳ್ಳುವಂತಿಲ್ಲ ಎಂಬ ದೂರು ಕೇಳಿಬಂದಿದೆ.
ವಿಮಾನ ಅಪಘಾತಕ್ಕೀಡಾಗಿದ್ದರೂ ಕೆಲವು ಮಂದಿ ಆಶ್ಚರ್ಯಕರವೆಂಬಂತೆ ಬದುಕುಳಿದಿದ್ದಾರೆ ಎನ್ನಲಾಗಿದೆ. ಟ್ವಿಟ್ಟರ್ ನಲ್ಲಿ ಹರಿದುಬರುತ್ತಿರುವ ಸಂದೇಶಗಳ ಪ್ರಕಾರ 11 ಮಂದಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಏರ್ ಇಂಡಿಯಾ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಸಹಾಯವಾಣಿ ಸಂಖ್ಯೆ: 0824-2220 422.
ಬಜ್ಪೆಯಲ್ಲಿ ನಕರಸದೃಶ ವಾತಾವರಣ
ಮಂಗಳೂರು, ಮೇ 22 : ಬಜ್ಪೆ ವಿಮಾನ ನಿಲ್ದಾಣದಲ್ಲಿ ನರಕಸದೃಶ ವಾತಾವರಣ ಸೃಷ್ಟಿಯಾಗಿದೆ. ದುರಂತದಲ್ಲಿ ಮಡಿದವರೆಲ್ಲ ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿದ್ದಾರೆ. ಮಡಿದವರ ಕುಟುಂಬದವರ ರೋದನವನ್ನಂತೂ ಮುಗಿಲು ಮುಟ್ಟಿದೆ.
ರನ್ ವೇ ದಾಟಿ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಗೆ ಸಿಕ್ಕ ಪತಂಗದಂತೆ ವಿಮಾನ ಸುಟ್ಟು ಭಸ್ಮವಾಗಿದೆ. ಅಪಘಾತ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ತಮ್ಮವರ್ಯಾರಾದರೂ ಬದುಕಿದ್ದಾರೆಯೇ ಎಂದು ಕಾದವರಿಗೆ ನಿರಾಶೆ ಕಾದಿತ್ತು. ಜವರಾಯ ಬಹುತೇಕ ಜನರನ್ನು ತನ್ನತ್ತ ಸೆಳೆದಿದ್ದ.
ಸತ್ತವರಲ್ಲಿ 50 ಜನ ಕಾಸರಗೋಡಿನವರು, 10 ಮಂಜೇಶ್ವರದವರು ಸೇರಿದ್ದಾರೆ. ಮಡಿದವರಲ್ಲಿ ಉಡುಪಿ, ಮಡಿಕೇರಿಯವರು ಕೂಡ ಸೇರಿದ್ದಾರೆ. 70 ಜನರನ್ನು ಮಾತ್ರ ಸುಟ್ಟು ಭಸ್ಮವಾದ ವಿಮಾನದಿಂದ ಹೊರತೆಗೆಯಲಾಗಿದೆ. ಇನ್ನೂ 50 ಜನ ವಿಮಾನದಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸತ್ತವರಲ್ಲಿ 105 ಜನ ಗಂಡಸರು, 32 ಹೆಂಗಸರು, 19 ಮಕ್ಕಳಲ್ಲಿ 4 ಜನ ಹಸುಗೂಸುಗಳೂ ಸೇರಿವೆ.
ಬದುಕುಳಿದವರು : ಈ ಭೀಕರ ದುರಂತದಲ್ಲಿ 6 ಜನ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಬದುಕುಳಿದವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಹೀಗಿವೆ : ಡಾ. ಸಬ್ರೀನಾ, ಮಹ್ಮದ್ ಕುಂಞ, ಪ್ರದೀಪ್, ಕಿಶೋರ್, ಉಮರ್ ಫಾರೂಕ್.
ವಿಮಾನ ಅಪಘಾತ; ಮಳೆಯ ನಡುವೆ ರಕ್ಷಣಾ ಕಾರ್ಯ
ಮಂಗಳೂರು, ಮೇ.22: ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ 812ವಿಮಾನದಲ್ಲಿನ ಶವಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗಿದ್ದರೂ 70ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ.
ಒಟ್ಟು 166 ಮಂದಿ ಸಾವಪ್ಪಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮೃತರ ಕುಟುಂಬಕ್ಕೆ ತಲಾ ರು.2 ಲಕ್ಷಗಳ ಪರಿಹಾರ ಧನವನ್ನು ಘೋಷಿಸಲಾಗಿದೆ.ದುರಂತದಲ್ಲಿ ಆರು ಮಂದಿ ಬದುಕುಳಿದಿದ್ದಾರೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಬದುಕುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಂಗಳೂರು ಜಿಲ್ಲಾ ಉತ್ಸುವಾರಿ ಸಚಿವ ಕೃಷ್ಣ ಜೆ ಪಾಲೇಮಾರು, ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಈಗಾಗಲೆ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ
ಮಂಗಳೂರು, ಮೇ.22: ಶನಿವಾರ ಮುಂಜಾನೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಪೈಲಟ್ ಸೈಬೀರಿಯಾ ಮೂಲದ ಝೆಡ್ ಗ್ಲೂಸಿಯಾ (Z Glucia, )ಎಂದು ಗುರುತಿಸಲಾಗಿದೆ. ಮಂಗಳೂರು ವಿಮಾನ ನಿಲ್ದ್ದಾಣದ ರನ್ ವೇ ಟೇಬಲ್ ಟಾಪ್ ರನ್ ಆಗಿದ್ದು (ಅಂದರೆ ಬೆಟ್ಟದ ಮೇಲಿನ ರನ್ ವೇ) ಎಂದು ಗುರುತಿಸಲಾಗಿದೆ.
ಪಶ್ಚಿಮ ವಲಯದ ಐಜಿಪಿ ಗೋಪಾಲ್ ಹೊಸೂರು ಮಾತನಾಡುತ್ತಾ, ವಿಮಾನ ಅಪಘಾತದಲ್ಲಿ ಒಟ್ಟು 166 ಮಂದಿ ಮೃತಪಟ್ಟಿದ್ದಾರೆ. ಅಪಘಾತ ಸಮಯದಲ್ಲಿ ವಿಮಾನದಿಂದ ಹೊರಗೆ ಹಾರಿ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ಇದೆ ಎಂದು ಶನಿವಾರ (ಮೇ.22)ತಿಳಿಸಿದರು.
ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಇಡೀ ಜಿಲ್ಲಾಡಳಿತ ಕೈಜೋಡಿಸಿದೆ. ಕೆಎಸ್ ಆರ್ ಪಿ, ಸಿವಿಲ್ ಪೊಲೀಸ್, ಸಂಚಾರ ಪೊಲೀಸ್ ಸೇರಿದಂತೆ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಭರದಿಂದ ಸಾಗಿದೆ . ಇದುವರೆಗೂ ಸುಟ್ಟುಕರಕಲಾದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಸಂಜೆಯವರೆಗೂ ರಕ್ಷಣಾ ಕಾರ್ಯ ನಡೆಯಲಿದೆ ಎಂದು ಗೋಪಾಲ್ ಹೊಸೂರು ವಿವರ ನೀಡಿದರು.
ಅಪಘಾತದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಿನ ಸೂಚನೆ ನೀಡುವವರೆಗೂ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಶವಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಹೊಸೂರು ತಿಳಿಸಿದರು.
ರನ್ ವೇಯಲ್ಲಿ ಅಪಘಾತಕ್ಕೀಡಾದ ವಿಮಾನ ಕಂದಕಕ್ಕೆ ಉರುಳಿಬಿದ್ದಿತ್ತು. ಅಗ್ನಿಶಾಮಕ ದಳ ವಿಮಾನಕ್ಕೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಏತನ್ಮಧ್ಯೆ ಗಾಯಗೊಂಡವರಿಗೆ ರು.50 ಸಾವಿರ ಪರಿಹಾರ ಧನವನ್ನು ಘೋಷಿಸಲಾಗಿದೆ. ಸಹಾಯವಾಣಿ ಸಂಖ್ಯೆ : 011-25603101.
ಮೃತರ ಕುಟುಂಬಕ್ಕೆ ರು.2 ಲಕ್ಷ ಪರಿಹಾರ ಘೋಷಣೆ
ನವದೆಹಲಿ, ಮೇ.22: ಮಂಗಳೂರಿನಲ್ಲಿ ಶನಿವಾರ ಮುಂಜಾನೆ ನಡೆದ ಭೀಕರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ ರು.2 ಲಕ್ಷ ಪರಿಹಾರ ಧನವನ್ನು ಪ್ರಧಾನಿ ಇಂದು ಘೋಷಿಸಿದರು.
ಯುಪಿಎ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಶನಿವಾರ ಸಂಜೆ ನಡೆಯಬೇಕಾಗಿದ್ದ ಸಮಾರಂಭವನ್ನು ವಿಮಾನ ದುರಂತ ನಡೆದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ವಿಮಾನ ದುರಂತದಲ್ಲಿ ಗಾಯಗೊಂಡವರಿಗೆ ತಲಾ ರು.50 ಸಾವಿರ ಪರಿಹಾರ ಧನವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನಾಗರಿಕ ವಿಮಾನಯಾನ ಸಚಿವ ಪ್ರಪುಲ್ ಪಟೇಲ್ ಹಾಗೂ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರೊಂದಿಗೆ ಪ್ರಧಾನಿಗಳು ದೂರವಾಣಿ ಮುಖಾಂತರ ಮಾತನಾಡಿ ವಿವರಗಳನ್ನು ತಿಳಿದುಕೊಂಡರು.
ವಿಮಾನ ದುರಂತ; ಸಹಾಯವಾಣಿ ಮಾಹಿತಿ
ಮಂಗಳೂರು, ಮೇ.22: ಶನಿವಾರ ಮುಂಜಾನೆ ದುರಂತಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ವಿವರಗಳನ್ನು ನೀಡಲು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಸಹಾಯವಾಣಿಯನ್ನು ಮಂಗಳೂರು, ಬೆಂಗಳೂರು ಹಾಗೂ ದೆಹಲಿಯಲ್ಲಿ ಸ್ಥಾಪಿಸಲಾಗಿದೆ.
*ಮಂಗಳೂರು ಸಹಾಯವಾಣಿ ಸಂಖ್ಯೆ: 082-42220422
*ಬೆಂಗಳೂರು ಸಹಾಯವಾಣಿ ಸಂಖ್ಯೆಗಳು: 080-66785172 ಮತ್ತು 080-22273310
*ದೆಹಲಿ ಸಹಾಯವಾಣಿ ಸಂಖ್ಯೆಗಳು: 011-25656196 ಮತ್ತು 011-25603101
ದುರಂತ ನಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಮಂಗಳೂರಿನಲ್ಲಿ ಕಂಟ್ರೋಲ್ ರೂಮನ್ನು ಸ್ಥಾಪಿಸಿದೆ. ದುರಂತದ ಬಗೆಗಿನ ಮಾಹಿತಿಯನ್ನು ದೂರವಾಣಿ ಮೂಲಕ ತಿಳಿದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರವಾಣಿ ಸಂಖ್ಯೆಗಳು: (044)-2256-0266 ಹಾಗೂ (044) 2857-8167.
May 22, 2010
Subscribe to:
Post Comments (Atom)
No comments:
Post a Comment