
ಬಿಎಂಐಸಿ ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿರುವ ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ, ನನ್ನ ಜೀವಮಾನದಲ್ಲೇ ಇಷ್ಟೊಂದು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ ಎಂದು ಹರಿಹಾಯ್ದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಕುರಿತು ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು. ನೈಸ್ ಮುಖ್ಯಸ್ಥ ಅಶೋಕ್ ಖೇಣಿ, ಯಡಿಯೂರಪ್ಪ ಮತ್ತು ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ತ್ರಿಮೂರ್ತಿಗಳಿದ್ದಂತೆ. ದಿನಕ್ಕೊಂದು ತಂತ್ರ ಹೊಸೆಯುತ್ತಿದ್ದಾರೆ. ಅಧಿವೇಶನ ಆರಂಭಕ್ಕೂ ಮೊದಲು ವಿಧಾನ ಮಂಡಲದಲ್ಲಿ ಚರ್ಚೆಗೆ ಸಿದ್ಧ ಎಂದ ಮುಖ್ಯಮಂತ್ರಿ ಕಲಾಪದ ಹಾದಿ ತಪ್ಪಿಸಿ ಪಲಾಯನ ಮಾಡಿದ್ದಾರೆ ಎಂದರು.
ನೈಸ್ ಯೋಜನೆ ಕುರಿತಂತೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರಂಸಿಂಗ್ ಅವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇವೆಲ್ಲಾ ಬರೇ ಬೂಟಾಟಿಕೆಯ ಹೇಳಿಕೆ ಎಂದ ಗೌಡರು, ಇತಂಹ ತಂತ್ರಗಳಿಂದ ನಾನು ತಾಳ್ಮೆ ಕಳೆದುಕೊಳ್ಳಲಾರೆ ಎಂದು ಹೇಳಿದರು.
ಹೊಸಕೆರೆ ಹಳ್ಳಿ ಬಳಿ ಎಕರೆಗೆ 10 ಕೋಟಿ ಬೆಲೆ ಇರುವ ಜಮೀನನ್ನು 5 ಲಕ್ಷದ 80 ಸಾವಿರ ರೂ.ಗೆ ನೈಸ್ ಕಂಪೆನಿಗೆ ಕೊಡಲು ಅಧಿಸೂಚನೆ ಹೊರಡಿಸಿರುವುದಾಗಿ ಈ ಸಂದರ್ಭದಲ್ಲಿ ಆರೋಪಿಸಿದರು.
ಅಲ್ಲದೆ, ಸದ್ದಿಲ್ಲದೆ ರೈತರ ಭೂಮಿಯನ್ನು ಸರ್ಕಾರ ನೈಸ್ ಕಂಪೆನಿಗೆ ಹಸ್ತಾಂತರ ಮಾಡುವ ಕೆಲಸ ಮಾಡುತ್ತಿದೆ. ಇದೇ ರೀತಿ ಗೋಣಿಪುರದಲ್ಲಿ ರೈತರ ಜಮೀನಿಗೆ ಬೆಲೆ ನಿಗದಿ ಮಾಡಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿ ಸಭೆ ನಿಗದಿಪಡಿಸಿದೆ ಎಂದರು.
No comments:
Post a Comment