ಮಿಂಚಿದ ಮೈಕೆಲ್ ಲಂಬ್; ಕಿಂಗ್ಸ್ ಎದುರು ಮಣಿದ ರಾಯಲ್ಸ್
43 ಎಸೆತಗಳಿಂದ 83 ರನ್ ದಾಖಲಿಸಿ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರುಗಳನ್ನು ಚಚ್ಚಿ ಹಾಕಿದ ಮೈಕೆಲ್ ಲಂಬ್ ನೆರವಿನಿಂದ ಬುಧವಾರ ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಒಂಬತ್ತು ವಿಕೆಟುಗಳ ಅಮೋಘ ಜಯ ಸಾಧಿಸಿದೆ.
16 ಬೌಂಡರಿ ಹಾಗೂ ಎರಡು ಸಿಕ್ಸರುಗಳನ್ನು ದಾಖಲಿಸಿದ ಲಂಬ್ ಮತ್ತು ಇನ್ನೊಬ್ಬ ಆರಂಭಿಕ ಆಟಗಾರ ನಮಾನ್ ಓಜಾ (33 ಎಸೆತಗಳಿಂದ 44) ಒಟ್ಟು 57 ಎಸೆತಗಳಿಂದ 109 ರನ್ನುಗಳ ಪಾಲುದಾರಿಕೆ ನೀಡಿದ್ದರು. ಇದರ ಸಹಕಾರದಿಂದ ಇನ್ನೂ ಐದು ಓವರುಗಳು ಬಾಕಿ ಉಳಿದಿರುವಾಗಲೇ ಗುರಿ ದಾಟಿದ ರಾಜಸ್ತಾನ, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿತು.
ಅದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಪರ ಮಹೇಲಾ ಜಯವರ್ದನೆ 33 ಎಸೆತಗಳಿಂದ 44 ಹಾಗೂ ಯುವರಾಜ್ ಸಿಂಗ್ ಮೂರು ಸಿಕ್ಸರುಗಳನ್ನೊಳಗೊಂಡ 28 ರನ್ ದಾಖಲಿಸಿದ್ದರು. ಆದರೆ ಕೊನೆಯ ಐದು ಓವರುಗಳಲ್ಲಿ ಪಂದ್ಯದ ಮೇಲಿನ ನಿಯಂತ್ರಣ ಕಳೆದುಕೊಂಡ ಪಂಜಾಬ್ ಎರಡು ವಿಕೆಟುಗಳನ್ನು ಕಳೆದುಕೊಂಡು ಕೇವಲ 27 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಒಟ್ಟಾರೆ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಸಾಧಾರಣವೆನಿಸುವ 153 ರನ್ನುಗಳನ್ನಷ್ಟೇ ಕುಮಾರ ಸಂಗಕ್ಕರ ಬಳಗ ಪೇರಿಸಿತ್ತು.
ಪಂಜಾಬ್ ಬೌಲಿಂಗನ್ನು ಬೌಂಡರಿ ಹಾಗೂ ಸಿಕ್ಸರುಗಳ ಮೂಲಕ ಧೂಳೀಪಟ ಮಾಡುತ್ತಾ ಸಾಗಿದ ಲಂಬ್ ಕೇವಲ 3.5 ಓವರುಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಐಪಿಎಲ್ ಮೂರನೇ ಆವೃತ್ತಿಯ ವೇಗದ ಅರ್ಧಶತಕ ಎಂಬ ದಾಖಲೆ ನಿರ್ಮಿಸಿದರು.
ಲಂಬ್ ಅತಿ ಹೆಚ್ಚು ದಂಡಿಸಿದ್ದು ಶ್ರೀಶಾಂತ್ ಮತ್ತು ರಮೇಶ್ ಪೊವಾರ್ ಅವರನ್ನು. ಇಬ್ಬರಿಗೂ ಸಾಕಷ್ಟು ಹೊಡೆತಗಳನ್ನು ನೀಡುವ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದರು.
ಲಂಬ್ ಅವರ ವಿಕೆಟನ್ನು ಕೊನೆಗೂ ಪಡೆದದ್ದು ರವಿ ಬೊಪಾರ. ನಂತರ ಬಂದ ಯೂಸುಫ್ ಪಠಾಣ್ 13 ಎಸೆತಗಳಿಂದ 21 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಓಜಾ ಕೂಡ 44 ಎಸೆತಗಳೊಂದಿಗೆ ನಾಟೌಟ್. 15 ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದ ರಾಜಸ್ತಾನ ಬಹುಬೇಗನೆ ಜಯಗಳಿಸಿ ನಗುವಿನೊಂದಿಗೆ ಪೆವಿಲಿಯನ್‌ಗೆ ಮರಳಿತು.
ಪಂಜಾಬ್ ಪರ ಜಯವರ್ದನೆ ಮತ್ತು ಯುವರಾಜ್ ಹೊರತುಪಡಿಸಿ ಇರ್ಫಾನ್ ಪಠಾನ್ ಅಜೇಯ 24 ಮತ್ತು ಮನ್ವಿಂದರ್ ಬಿಸ್ಲಾ 20 ರನ್ ಗಳಿಸಿದ್ದರು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಂಬ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೋಟ್ಲಾ ಪಿಚ್ ಯೋಗ್ಯವಲ್ಲ; ಕುಂಬ್ಳೆ ಹೇಳಿಕೆಗೆ ಡಿಡಿಸಿಎ ತಿರುಗೇಟು
ಟ್ವೆಂಟಿ-20 ಪ್ರಕಾರದ ಕ್ರಿಕೆಟ್‌ಗೆ ಷಿರೋಜ್ ಷಾ ಕೋಟ್ಲಾ ಮೈದಾನವು ಯೋಗ್ಯವಲ್ಲ ಎಂಬ ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ಅನಿಲ್ ಕುಂಬ್ಳೆ ಹೇಳಿಕೆಗೆ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಆಕ್ಷೇಪವೆತ್ತಿದೆ.
ಪ್ರಸಕ್ತ ನಡೆಯುತ್ತಿರುವ ಇಂಡಿಯರ್ ಪ್ರೀಮಿಯರ್ ಲೀಗ್‌ಗಾಗಿ ನಿರ್ಮಿಸಲಾಗಿರುವ ಸ್ಪರ್ಧಾತ್ಮಕ ವಿಕೆಟುಗಳಲ್ಲಿ ಇದು ಒಂದಾಗಿದೆ ಎಂದು ಡಿಡಿಸಿಎ ಹೇಳುವ ಮೂಲಕ ಕುಂಬ್ಳೆಯವರಿಗೆ ತಿರುಗೇಟು ನೀಡಿದೆ.
ಫಿರೋಜ್ ಷಾ ಮೈದಾನದಲ್ಲಿ ಭಾನುವಾರ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೋತ ನಂತರ ಪ್ರತಿಕ್ರಿಯೆ ನೀಡಿದ್ದ ಕುಂಬ್ಳೆ, ಚುಟುಕು ಪ್ರಕಾರದ ಆಟಕ್ಕೆ ದೆಹಲಿ ಮೈದಾನ ಸೂಕ್ತವಲ್ಲ ಎಂದು ಹೇಳಿದ್ದರು.
ಕುಂಬ್ಳೆ ಆಪಾದನೆಯನ್ನು ನಾನು ನಿರಾಕರಿಸುತ್ತೇನೆ. ಕೋಟ್ಲಾ ಮೈದಾನ ಇದೀಗಲೂ ಸ್ಪೋರ್ಟಿಂಗ್ ವಿಕೆಟ್ ಆಗಿದೆ. ಅಲ್ಲದೆ ಐಸಿಸಿ ಕ್ಯೂರಟರ್ ಮುಖ್ಯಸ್ಥ ಆಂಡಿ ಅಂಟ್ಕಿನ್ಸನ್ ಕೂಡಾ ಪಿಚ್‌ಗೆ ಮಾನ್ಯತೆ ನೀಡಿದ್ದಾರೆ ಎಂದು ಡಿಡಿಸಿಎ ಕ್ರೀಡಾ ಕಾರ್ಯದರ್ಶಿ ಸುನೀಲ್ ದೇವ್ ತಿಳಿಸಿದರು.
ದೇಶದ ಇತರ ತಾಣಗಳಿಗೆ ಹೋಲಿಸಿದಾಗ ಇಲ್ಲಿನ ವಿಕೆಟ್ ಸ್ಫರ್ಧಾತ್ಮಕವಾಗಿದೆ. ಅಲ್ಲದೆ ಇತರ ಯಾವುದೇ ತಂಡಗಳು ಅಕ್ಷೇಪವೆತ್ತಿಲ್ಲ ಎಂದವರು ಹೇಳಿದರು.
ಈ ಹಿಂದೆ ಕೋಟ್ಲಾ ಮೈದಾನದಲ್ಲಿ 200ರ ಮೊತ್ತವನ್ನು ಬೆನ್ನತ್ತುವುದು ಕಷ್ಟಕರ ಎಂದು ಡೆಲ್ಲಿ ನಾಯಕ ಗೌತಮ್ ಗಂಭೀರ್ ಹೇಳಿದ್ದರು.
ಗಾಬರಿಯಾಗಬೇಕಿಲ್ಲ; ಇದು ಎಚ್ಚರಿಕೆಯ ಗಂಟೆ: ಸಚಿನ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎದುರಾದ ಸೋಲಿನ ನಂತರ ಪ್ರತಿಕ್ರಿಯೆ ನೀಡಿರುವ ಮುಂಬೈ ಇಂಡಿಯನ್ಸ್ ನಾಯಕ ಸಚಿನ್ ತೆಂಡೂಲ್ಕರ್, ಇದರಿಂದ ಗಾಬರಿಯಾಗಬೇಕಿಲ್ಲ ಎಂದು ಹೇಳಿದ್ದಾರೆ.
ಸಕಾಲದಲ್ಲಿ ನಮಗೆ ಸೋಲು ಎದುರಾಗಿದೆ. ಇದು ಎಚ್ಚರಿಯ ಗಂಟೆಯಾಗಿದ್ದು, ಆದ್ದರಿಂದ ಆತಂಕಪಡಬೇಕಿಲ್ಲ ಎಂದವರು ಹೇಳಿದರು.
ತಾನೀಗ ಚೇತರಿಕೆಯ ಹಂತದಲ್ಲಿದ್ದು, ಮುಂದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದೇನೆ ಎಂದು ಸಚಿನ್ ವ್ಯಕ್ತಪಡಿಸಿದರು.
ಚೆನ್ನೈ ವಿರುದ್ಧ ಮಂಗಳವಾರ ನಡೆದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದ ಸಚಿನ್ ನಿವೃತ್ತಿ ಘೋಷಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಮತ್ತೆ ಕ್ರೀಸಿಗಿಳಿದ ಅವರು ತಂಡವನ್ನು ವಿಜಯದ ಗೆರೆ ದಾಟಿಸುವಲ್ಲಿ ವಿಫಲರಾಗಿದ್ದರು.
ಆ ಸಂದರ್ಭದಲ್ಲಿ ನಿಶ್ಶಕ್ತನಾಗಿದ್ದ ನಾನು ಒದ್ದಾಡುತ್ತಿದೆ. ಆದ್ದರಿಂದ ಸುಮ್ನೆ ವಿಕೆಟ್ ಒಪ್ಪಿಸುವ ಬದಲು ಅನಿವಾರ್ಯವಾದರೆ ಆನಂತರ ಬ್ಯಾಟಿಂಗ್ ಮಾಡುವ ಇರಾದೆ ನನ್ನದಾಗಿತ್ತು. ಆದರೆ ಚೆಂಡನ್ನು ಅಟ್ಟುವ ಸಾಮರ್ಥ್ಯ ಕೂಡಾ ನನ್ನಲ್ಲಿರಲಿಲ್ಲ ಎಂದವರು ಹೇಳಿದರು. ಆದರೂ ಮುಂದಿನ ಪಂದ್ಯಕ್ಕೆ ಫಿಟ್ ಆಗುವ ಭರವಸೆ ಹೊಂದಿದ್ದೇನೆ ಎಂದವರು ಹೇಳಿದರು.
ಸಚಿನ್ ಸ್ನಾಯುಸೆಳೆತ ಸೋಲಿಗೆ ಕಾರಣ...
ಮತ್ತೊಂದೆಡೆ ತಂಡದ ಸೋಲಿಗೆ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸ್ನಾಯುಸೆಳೆತಕ್ಕೊಳಗಾಗಿರುವುದು ಕಾರಣ ಎಂದು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪ್ಟಟಿದ್ದಾರೆ.
ಒಂದು ವೇಳೆ ಸಚಿನ್ 15ನೇ ಓವರ್ ತನಕ ಕ್ರೀಸಿನಲ್ಲಿರುತ್ತಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ನಾವು ಅಂಬಾಟಿ ರಾಯುಡು ಹಾಗೂ ಸೌರಭ್ ತಿವಾರಿ ವಿಕೆಟುಗಳನ್ನು ಬಹುಬೇಗನೆ ಕಳೆದುಕೊಂಡಿವು. ಅಲ್ಲದೆ ಉತ್ತಮ ಜೊತೆಯಾಟ ಕೂಡಾ ಮೂಡಿಬರಲಿಲ್ಲ ಎಂದವರು ಹೇಳಿದರು.
ನಿವೃತ್ತಿಯವರೆಗೂ ಕೆಕೆಆರ್‌ಗಾಗಿ ಆಡಲಿದ್ದೇನೆ: ಗಂಗೂಲಿ
ನೂತನವಾಗಿ ರೂಪುಗೊಂಡಿರುವ ಐಪಿಎಲ್‌ನ ಪುಣೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆಂಬ ವರದಿಗಳನ್ನು ನಿರಾಕರಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕಪ್ತಾನ ಸೌರವ್ ಗಂಗೂಲಿ, ತಾನು ಐಪಿಎಲ್‌ಗೆ ನಿವೃತ್ತಿ ಘೋಷಿಸುವ ತನಕ ಕೆಕೆಆರ್‌ಗಾಗಿ ಆಡಲಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ.
ಆಟಗಾರರ ಜೊತೆಗಿನ ಫ್ರಾಂಜೈಸಿ ತಂಡಗಳ ಮೂರು ವರ್ಷಗಳ ಒಪ್ಪಂದವು ಐಪಿಎಲ್-3ರ ಅವಧಿಯ ನಂತರ ಕೊನೆಗೊಳ್ಳಲಿದ್ದು, ಇದರಿಂದಾಗಿ ಒಂದು ವೇಳೆ ಗಂಗೂಲಿ ನಿವೃತ್ತಿ ಅಥವಾ ಪುಣೆ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ವರದಿಯಾಗಿತ್ತು.
ನಾನೀಗ ನಿವೃತ್ತಿಯ ಬಗ್ಗೆ ಯೋಚಿಸಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ನಾನು ಸಾಧ್ಯವಾದಷ್ಟು ಸಮಯ ಐಪಿಎಲ್‌ನಲ್ಲಿ ಮುಂದುವರಿಯಲಿದ್ದಾನೆ. ಸದ್ಯ ಕೋಲ್ಕತ್ತಾವನ್ನು ಪ್ರತಿನಿಧಿಸುತ್ತಿರುವ ನಾನು ಇದನ್ನು ಮುಂದುವರಿಸಲಿದ್ದೇನೆ ಎಂದವರು ಹೇಳಿದ್ದಾರೆ.
ಈ ಹಿಂದೆ ಸಮಾರಂಭವೊಂದರಲ್ಲಿ ಕೆಕೆಆರ್ ಮಾಲೀಕ ಶಾರೂಖ್ ಖಾನ್ ನೀಡಿದ ಹೇಳಿಕೆಯಲ್ಲಿ, ಗಂಗೂಲಿ ತನ್ನ ಭವಿಷ್ಯವನ್ನು ಸ್ವತಃ ನಿರ್ಧರಿಸಲಿದ್ದಾರೆಂದು ಹೇಳಿಕೊಂಡಿದ್ದರು.
ಸಚಿನ್, ಗಂಗೂಲಿ, ದ್ರಾವಿಡ್ ಅಥವಾ ಕುಂಬ್ಳೆಯಂತಹ ಶ್ರೇಷ್ಠ ಆಟಗಾರರು ಯಾವಾಗ ನಿವೃತ್ತಿಯಾಗಲಿದ್ದಾರೆಂದು ನಾವು ಹೇಳಲಾಗದು. ಆ ನಿರ್ಧಾರ ಅವರೇ ಕೈಗೊಳ್ಳಲಿದ್ದಾರೆ ಎಂದವರು ಹೇಳಿದ್ದರು.
Apr 7, 2010
Subscribe to:
Post Comments (Atom)
No comments:
Post a Comment