ಬಿಬಿಎಂಪಿ-ಪಕ್ಷ ಸೋಲಲು ಮುಖಂಡರೇ ಕಾರಣ: ವಿಶ್ವನಾಥ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಪಕ್ಷದ ನಾಯಕರೇ ಕಾರಣ ಎಂದು ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ಗಂಭೀರವಾಗಿ ಆರೋಪಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಚಾಲನೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾಯಕರೇ ಕಾರಣರಾಗಿದ್ದು, ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ನೂರಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷವಾಗಿದೆ. ತನ್ನ ಸ್ವಂತ ಬಲದ ಮೇಲೆ ಅಧಿಕಾರ ನಡೆಯುವ ಎಲ್ಲಾ ಸಾಮರ್ಥ್ಯ ಪಕ್ಷಕ್ಕಿದೆ. ಆದರೆ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಅಸಮರ್ಥರಾಗಿರುವುದು ದುರಂತ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಲ್ಲದೇ ರಾಜ್ಯರಾಜಕಾರಣದ ಪಕ್ಷದಲ್ಲಿನ ಒಳಜಗಳ, ನಾಯಕರ ಒಣಪ್ರತಿಷ್ಠೆ ಸೇರಿದಂತೆ ಸಮಗ್ರ ಚಿತ್ರಣದ ಬಗ್ಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆಯುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಬಿಬಿಎಂಪಿ ಚುನಾವಣೆಯ ಸೋಲಿನಲ್ಲಿ ಪಕ್ಷದ ನಾಯಕರ ನಿರ್ಲಕ್ಷ್ಯವೇ ಕಾರಣ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದ ಬೆನ್ನಲ್ಲೇ, ವಿಶ್ವನಾಥ್ ಅವರು ಗಂಭೀರವಾಗಿ ಆರೋಪಿಸಿರುವುದು ಕಾಂಗ್ರೆಸ್ ಪಕ್ಷದೊಳಗೆ ಮತ್ತೊಮ್ಮೆ ಅಸಮಾಧಾನದ ಕಿಡಿ ಹೊತ್ತಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ.
ನನ್ನ ಮಗ ಮೇಯರ್ ಆಕಾಂಕ್ಷಿಯಲ್ಲ: ಕಟ್ಟಾ ಸುಬ್ರಮಣ್ಯ
ನನ್ನ ಮಗ ಮೇಯರ್ ಗದ್ದುಗೆಯ ಆಕಾಂಕ್ಷಿಯಲ್ಲ' ಎಂದು ವಸಚಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಯರ್ ಹುದ್ದೆಗಾಗಿ ಜಗದೀಶ್ ಕಟ್ಟಾ ಪ್ರಮುಖ ಆಕಾಂಕ್ಷಿಯಾಗಿದ್ದಾರೆಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಮೇಯರ್‌ಗಿರಿಗಾಗಿ ಸಾಕಷ್ಟು ಕಸರತ್ತು ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ನಟರಾಜ್, ನಾಲ್ಕು ಬಾರಿ ಜಯಭೇರಿ ಗಳಿಸಿದ್ದ ಮೂರ್ತಿ ಸೇರಿದಂತೆ ಹಲವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ. ಏತನ್ಮಧ್ಯೆ ಕಟ್ಟಾ ಜಗದೀಶ್ ಅವರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂದು ಊಹಾಪೋಹಗಳು ಎದ್ದಿದ್ದವು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾರನ್ನು ಮೇಯರ್ ಆಗಿ ಆಯ್ಕೆ ಮಾಡಬೇಕೆಂಬ ಬಗ್ಗೆ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.
ಏತನ್ಮಧ್ಯೆ, ಬಿಬಿಎಂಪಿಯಲ್ಲಿ ಯಾರು ಹಿರಿಯ ಸದಸ್ಯರಿದ್ದಾರೋ ಅವರಿಗೆ ಮೊದಲ ಪ್ರಾಶಸ್ತ್ಯ ಎಂದು ಸಾರಿಗೆ ಸಚಿವ ಅಶೋಕ್ ಹೇಳಿದ್ದರು. ಹಾಗಾಗಿ ಇದೀಗ ಹಿರಿಯ ಸದಸ್ಯರುಗಳ ನಡುವೆಯೇ ಪೈಪೋಟಿ ಬಿರುಸುಗೊಂಡಿದೆ.
ಕಷ್ಟಪಟ್ಟಿದ್ರೆ ಇನ್ನಷ್ಟು ಸ್ಥಾನ ಗೆಲ್ಲಬಹುದಿತ್ತು: ಸಿದ್ದರಾಮಯ್ಯ
ಕಡಿಮೆ ಮತದಾನ, ಬಿಜೆಪಿ ಹಣ ಹಂಚಿಕೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಬಿಎಂಪಿ ಚುನಾವಣೆಯಲ್ಲಿ ಹಿನ್ನಡೆ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಮ್ಮವರು ಶ್ರಮಪಟ್ಟಿದ್ದರೆ ಇನ್ನಷ್ಟು ಸೀಟ್ ಗೆಲ್ಲಬಹುದಿತ್ತು. ಆದರೆ ಸಿಕ್ಕ ಅವಕಾಶವನ್ನು ಮುಖಂಡರು ಹಾಗೂ ಅಭ್ಯರ್ಥಿಗಳು ಬಿಟ್ಟುಕೊಟ್ಟಿದ್ದಾರೆ. ಒಟ್ಟಾರೆ ಚುನಾವಣೆಯಲ್ಲಿ ಭ್ರಷ್ಟಾಚಾರ ಮೇಲುಗೈ ಸಾಧಿಸಿದ್ದು ಸ್ಪಷ್ಟ. ಈ ವಿಷಯದಲ್ಲಿ ಹೆಚ್ಚೇನೂ ಹೇಳಲಾರೆ ಎಂದರು.
ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಹೀನಾಯ ಸೋಲು ಅನುಭವಿಸಿದ್ದು ಸತ್ಯ. ಇದಕ್ಕೆ ನಮ್ಮವರ ಪರಿಶ್ರಮದ ಕೊರತೆಯೂ ಸ್ವಲ್ಪ ಕಾರಣವಾಗಿದೆ ಎಂದು ವಿಮರ್ಷಿಸಿದ್ದಾರೆ.
ಆದರೆ ಮುಖ್ಯವಾಗಿ ಬಿಜೆಪಿ ಮುಖಂಡರಿಗೆ ಚುನಾವಣೆ ಗೆಲ್ಲಲೇ ಬೇಕಾದ ಅನಿವಾರ್ಯ ಇತ್ತು. ಅದಕ್ಕಾಗಿ ಸಾಕಷ್ಟು ಹಣ ವ್ಯಯಿಸಿದ್ದಾರೆ. ಜತೆಗೆ ಇದುವರೆಗೂ ಕಡಿಮೆ ಮತದಾನ ಆಗಿದ್ದರೆ ಕಾಂಗ್ರೆಸ್ ಗೆಲ್ಲುತ್ತೆ ಎಂಬ ಮಾತು ಇತ್ತು. ಈಗ ಅದು ಸುಳ್ಳಾಗಿ ಬಿಜೆಪಿ ಗೆಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದ್ದಾರೆ.
'ಕೈ' ಸೋಲಿಗೆ ಸಿದ್ದು, ಡಿಕೆಶಿ, ದೇಶಪಾಂಡೆ ಕಾರಣ: ಈಶ್ವರಪ್ಪ
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯದರ್ಶಿ ಡಿ.ಕೆ.ಶಿವಕುಮಾರ್ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇರವಾಗಿ ಆರೋಪಿಸಿದ್ದಾರೆ.
ಇಲ್ಲಿನ ಕೈದಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿ, ಗ್ರಾಮಪಂಚಾಯತ್ ಫಲಿತಾಂಶ ಬಂದ ನಂತರ ಜೆಡಿಎಸ್ ಮುಖಂಡ ರೇವಣ್ಣಗೆ ತಕ್ಕ ಉತ್ತರ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ನೆಲಕಚ್ಚಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೇ ಪಕ್ಷದ ಸೋಲಿಗೆ ಸಿದ್ದರಾಮಯ್ಯ, ದೇಶಪಾಂಡೆ ಹಾಗೂ ಡಿ.ಕೆ.ಶಿ ಕಾರಣ ಎಂದು ವ್ಯಂಗ್ಯವಾಡಿದ್ದಾರೆ.
Apr 7, 2010
Subscribe to:
Post Comments (Atom)
No comments:
Post a Comment