
ಮಂಗಳೂರು: ಚುನಾವಣೆಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಆರೋಪ ಸುಳ್ಳು. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಕಪೋಲಕಲ್ಪಿತ ಆರೋಪ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸ್ಪಷ್ಟಪಡಿಸಿದರು.
ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಹಿಂದಿನಿಂದಲೂ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಿದೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಇಲ್ಲದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸೋಲನುಭವಿಸಿದೆ. ಹೀಗಿರುವಾಗ ತಮ್ಮ ಪಕ್ಷ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭ ಎನ್ನುವ ಮಾತಲ್ಲಿ ಹುರುಳಿಲ್ಲ ಎಂಬ ವಾದ ಮಜೀದ್‌ರದ್ದಾಗಿದೆ.
ಎಸ್‌ಡಿಪಿಐ ಕಳೆದ ಅಕ್ಟೋಬರ್‌ನಲ್ಲಿ ಉದಯವಾದ ಪಕ್ಷವಾಗಿದ್ದು, ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಒಂದು ಸ್ಥಾನದಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಇತರ ಪಕ್ಷಗಳು ಒಂದರಿಂದ ಎರಡು ಕೋಟಿ ರೂ. ಖರ್ಚು ಮಾಡಿದ್ದರೂ ಎಸ್‌ಡಿಪಿಐ ಜನರಿಂದ ಹಣ ಸಂಗ್ರಹಿಸಿ ಕೇವಲ 1,80,000 ಖರ್ಚು ಮಾಡಿದೆ ಎಂದು ಮಜೀದ್ ಮಾಹಿತಿ ನೀಡಿದರು.
ಬಂಡವಾಳಶಾಹಿಗಾರರ ಹಣ, ಹೆಂಡ, ತೋಳ್ಬಲದ ವಿರುದ್ಧವಾಗಿ ಪಕ್ಷ ನಿಂತಿದ್ದು ಇದೇ ಆಧಾರದಲ್ಲಿ ಜನಪರ ಆಡಳಿತ ನೀಡುವ ಸಲುವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ. ಮೊನ್ನೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷವು ರಾಜ್ಯದ 368 ಸ್ಥಾನಗಳಲ್ಲಿ ಸ್ಪರ್ಧಿಸಿ 67 ಸ್ಥಾನಗಳಲ್ಲಿ ಜಯ ಸಾಧಿಸಿದೆ. ದ.ಕ.ದಲ್ಲಿ 273 ಸ್ಥಾನಗಳಲ್ಲಿ ಸ್ಪರ್ಧಿಸಿ 41 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಉಡುಪಿಯಲ್ಲಿ 31 ಸ್ಥಾನಗಳ ಪೈಕಿ 13ರಲ್ಲಿ, ಕೊಡಗು ಜಿಲ್ಲೆಯಲ್ಲಿ 34 ಸ್ಥಾನಗಳ ಪೈಕಿ 9ರಲ್ಲೂ, ತುಮಕೂರಿನಲ್ಲಿ ಒಂಭತ್ತು ಸ್ಥಾನಗಳಲ್ಲಿ ಮೂರರಲ್ಲೂ ಜಯ ಸಾಧಿಸಿದೆ. ಕೊಡಗು ಜಿಲ್ಲೆಯ ಬೇಡಕೊಳ್ಮ ಗ್ರಾ.ಪಂ.ನಲ್ಲಿ ಅಧಿಕಾರಕ್ಕೆ ಬಂದಿದ್ದು ಇಲ್ಲಿ ಒಂಭತ್ತು ಸ್ಥಾನಗಳನ್ನು ಪಕ್ಷ ಪಡೆದಿದ್ದು ಇದರಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿ ಇದ್ದರೆ ಉಳಿದವರು ಮುಸ್ಲಿಮೇತರರಾಗಿದ್ದಾರೆ.
ಇದೇ ತಿಂಗಳ 25ರಂದು ಮಂಗಳೂರು ಪುರಭವನದಲ್ಲಿ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವಿದ್ದು ಇದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಮಜೀದ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಮತ್ತು ರಾಜ್ಯ ಸದಸ್ಯ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
No comments:
Post a Comment